ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಂಗೊಳ್ಳಿ ರಾಯಣ್ಣನ ಹೆಸರು ಜನ್ಮ ದಿನಾಚರಣೆಗೆ ಮಾತ್ರ ಸೀಮಿತವಲ್ಲ. ರಾಯಣ್ಣನ ಹೆಸರಿನ 150 ಕೋಟಿ ರೂಪಾಯಿ ವೆಚ್ಚದ ಸೈನಿಕ ಶಾಲೆ ನಿರ್ಮಾಣ ಮಾಡಲಾಗುತಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ತಿಳಿಸಿದರು.
ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ರವಿವಾರ (ಆ.15) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿತ್ತೂರು ಸಂಸ್ಥಾನದ ರಕ್ಷಣೆಗೆ ನಿಂತ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಅವರ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದು, ಅದರಲ್ಲಿ ರಾಯಣ್ಣ ಪಾತ್ರ ಬಹಳ ಮಹತ್ವದಾಗಿದೆ ಎಂದು ಹೇಳಿದರು.
ಕಿತ್ತೂರು ನಾಡನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸಂಗೊಳ್ಳಿ ರಾಯಣ್ಣನಿಗೆ ಸಲ್ಲುತ್ತದೆ. ನಾಡಿಗೆ ರಾಯಣ್ಣನ ಕೊಡುಗೆ ಅಪಾರಗಿದ್ದು, ಭವಿಷ್ಯದಲ್ಲಿ ಅವರನ್ನು ಸದಾ ಜೀವಂತವಾಗಿರಿಸಲು ನಿರ್ಮಾಣ ಹಂತದಲ್ಲಿರುವ ಅನೇಕ ಹೊಸ ಶಾಲೆಗಳಿಗೆ ರಾಯಣ್ಣನ ಹೆಸರು ನಾಮಕರಣ ಮಾಡಲಾಗುವದು.
ರಾಯಣ್ಣನ ಹೆಸರು ಜನ್ಮದಿನ ಆಚರಣೆಗೆ ಮಾತ್ರ ಸೀಮಿತವಲ್ಲ, ರಾಯಣ್ಣನ ಹೆಸರಿನಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ರಾಯಣ್ಣನ ಜೀವನ ಚರಿತ್ರೆ ಯುವಪೀಳಿಗೆಯ ಪ್ರೇರಣೆ ಮತ್ತು ಶಕ್ತಿ, ಮಕ್ಕಳಲ್ಲಿ ದೇಶಪ್ರೇಮ ಸಾರುವ ದಂತಕತೆಯಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ, ಬೆಳಗಾವಿ ಜಿಲ್ಲೆ ವೀರ ಯೋಧರ ಜನ್ಮಭೂಮಿ, ಭಾರತಮಾತೆಯ ಸೇವೆಗೆ ಅನೇಕ ಯೋಧರನ್ನು ಈ ನಾಡು ಕೊಡುಗೆಯಾಗಿ ನೀಡಿದೆ. ದೇಶ ಸೇವೆಗೆ ಅನೇಕ ಸೈನಿಕರನ್ನು ನೀಡಿದ ಕೀರ್ತಿ ಈ ನಾಡಿಗೆ ಸಲ್ಲುತ್ತದೆ.
ರಾಯಣ್ಣನ ಜನ್ಮದಿನದ ಅಂಗವಾಗಿ ಹುತಾತ್ಮ ಯೋಧರನ್ನು ಸ್ಮರಿಸೋಣ. ಅನೇಕ ಹುತಾತ್ಮ ಯೋಧರು ಬೆಳಗಾವಿ ಭಾಗದವರಾಗಿದ್ದು, ಪಾರಂಪರಿಕವಾಗಿ ದೇಶ ಸೇವೆ ಎಂಬುದು ಈ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬರ ಎದೆಯಲ್ಲೂ ಇದೆ ಎಂದು ಶಾಸಕ ಬೆನಕೆ ತಿಳಿಸಿದರು.
ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡುತ್ತಿರುವದು ಹೆಮ್ಮೆಯ ವಿಷಯವಾಗಿದೆ ಜೊತೆಗೆ ರಾಯಣ್ಣನ ಸಮಾಧಿಯಿರುವ ನಂದಗಡದಲ್ಲಿ ಚಿತ್ರಕಲೆ ಶಿಲ್ಪ ಕಲೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಮ್ಯೂಸಿಯಂ ಮಾಡಲಾಗುವುದು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜು ಪ್ರಾಚಾರ್ಯರಾದ ಎಂ. ಜಯಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್. ಹೆಚ್.ವಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸ್ವಾಗತ ಕೋರಿದರು. ಸುನೀತಾ ದೇಸಾಯಿ ನಿರೂಪಿಸಿದರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ