ಪ್ರೊ. ಜಿ. ಎಚ್. ಹನ್ನೆರಡುಮಠ
ಸಂಜೆಯ ಜಡ ನಿದ್ರೆಯಿಂದ ತುಂಬಾ ಡಲ್ಲಾಗಿ ಎಚ್ಚತ್ತು …. ಮನೆಯಿಂದ ಎರಡು ಹೆಜ್ಜೆ ಹೋಗಿರಲಿಲ್ಲ…. ಒಬ್ಬಳು ಅಪರಿಚಿತ ಪುಟ್ಟಪುಟಾಣಿ ಹುಡಿಗಿ…. ನನ್ನೆಡೆಗೆ ಸೇಬು ಗಲ್ಲದ ನಗೆ ತೂರಿ…. “ಹಲೋ ಅಂಕಲ್…. ಗುಡ್ ಈವನಿಂಗ್….” ಎಂದು ಹೇಳಿದಾಗ , ನನ್ನ ಎದೆಯಂಗಳದಲ್ಲಿ ನೂರು ನೂರು ಕಾರಂಜಿಗಳು ಚಿಲ್ಲನೇ ಚಿಮ್ಮಿದವು ! ನನ್ನ ಸಹಸ್ರ ಸಹಸ್ರ ನರನಾಡಿಗಳಲ್ಲೆಲ್ಲಾ ಜೋಗದ ಜಲಪಾತದ ಹರ್ಷ ಹೊಮ್ಮಿ….. ಮೈಮನವನ್ನೆಲ್ಲಾ ಚಿಮ್ಮಿ ಚಿಮುಕಿಸಿ…..ಆ ಹುಡಿಗಿಗೆ…. “ಓ ಗುಡ್ ಈವನಿಂಗ್ ….ಹ್ಯಾವ್ ಏ ನೈಸ್ ಈವನಿಂಗ್….” ಎಂದುಹೇಳಿ …. ಮುತ್ತು ಕೊಟ್ಟು ಮುನ್ನಡೆದೆ!
ಒಂದೇ ಒಂದು ಸೆಕೆಂಡಿನಲ್ಲಿ ನನಗೆ ಹೊಸಜನ್ಮ ಬಂದಿತ್ತು ! ಚಿಣಿಗಿ ಹಾವಿನಂತೆ ಪುಟಿಯುತ್ತ ಪಾತರಗಿತ್ತಿಯಂತೆ ಹಾರುತ್ತ ಮುನ್ನಡೆದೆ. ಮುಂದೆ ಬಂದವರಿಗೆಲ್ಲ…. ಅವರೇ ಅಚ್ಚರಿಗೊಳ್ಳುವಂತೆ…. ಎರಡೂ ಕೈಯೆತ್ತಿ….. ಕಣ್ಣು ಬಿಚ್ಚಿ…. ಕುಲುಕುಲು ನಕ್ಕು ಅವರಿಗೆಲ್ಲ ವಿಶ್ ಮಾಡಿದೆ ! ಎಂಥಾ ಅದ್ಭುತ ಪರಿವರ್ತನೆ !
ಆ ತೋಟದ ದಾರಿಯಲ್ಲಿ ಹೂಗಳೆಲ್ಲಾ ನನ್ನೊಂದಿಗೆ ಹೂಬೇಹೂಬಾಗಿ ಹರಟೆ ಹೊಡೆದವು. ಮಾವು-ಹಲಸು-ಗೋಡಂಬಿ- ಸೀತಾಫಲ- ಪೇರಲ ಗಿಡಗಳೆಲ್ಲಾ ನನ್ನೊಂದಿಗೆ ಖುಶಿತುಂಬಿ ತೂಗಾಡಿದವು. ಎಂಥ ರೂಪಾಂತರ !
ಆ ಮಗು ನೀಡಿದ ಈ ಹರ್ಷದ ಸ್ಪರ್ಶಕ್ಕೆ ನಾನು ಏನುತಾನೆ ಕೊಟ್ಟೇನು ? ಒಂದೇ ಒಂದು ಬಿಚ್ಚು ಮನಸಿನ ಮಂದಹಾಸ ಎಷ್ಟೋ ಜನರ ಅಂತಸ್ಸತ್ವವನ್ನು ಚುಂಬಿಸಿ ಚಿಮ್ಮಿಸಬಲ್ಲದು.
ನಾವು ನಕ್ಕರೂ ಕೂಡ ಪ್ರತಿಯಾಗಿ ನಗಲಾರದ ಕಡಜೀರಿಗಿ ಹುಳದಂಥ ಹುಂಡುಹುಂಡು ಮುಖಗಳನ್ನು ನೀವು-ನಾವು ಜೀವನದಲ್ಲಿ ಎಷ್ಟು ಸಲ ಕಂಡಿಲ್ಲ ?
ಆದರೆ ನಮ್ಮ ಭಾರತೀಯ ಪದ್ಧತಿಯಲ್ಲಿ, ನಿನ್ನೆ ಮೊನ್ನೆಯವರಿಗೆ ಯಾರೇ ಅಪರಿಚಿತರು ಪ್ರವಾಸದಲ್ಲಿ ಭೆಟ್ಟಿ ಆದರೆ…. ನಾವು ಹಾಯ್-ಬಾಯ್ಗಳಿಗೆ ನಿಲ್ಲುತ್ತಿರಲಿಲ್ಲ. ನಮ್ಮ ಪರಿಚಯ ಗಾಢವಾಗುತ್ತ ಹೋಗುತ್ತಿತ್ತು. “ನಿಮ್ಮ ಊರು ಯಾವುದು…. ಮಳೆಬೆಳೆ ಹೇಗಿದೆ…. ಎಷ್ಟು ಮಕ್ಳು ನಿಮಗೆ…. ಗಂಡು ಎಷ್ಟು…. ಹೆಣ್ಣು ಎಷ್ಟು…. ಹೆಣ್ಣನ್ನು ಯಾ ಊರಿಗೆ ಕೊಟ್ಟಿದ್ದೀರಿ…. ಅವರು ಏನು ಮಾಡುತ್ತಾರೆ…. ನಿಮ್ಮ ಮಗನಿಗೆ ಕನ್ಯಾ ಸಿಕ್ಕಿದೆಯೇ….. ಅವರಿಗೂ ನಿಮಗೂ ಹೆಣ್ಗಂಡು ಆಗುತ್ತದೆಯೇ…..” ಇತ್ಯಾದಿ ಆಳ-ಆಳದ ಮಾತುಗಳಲ್ಲಿ ಮುಳುಗಿ ಹೋಗುತ್ತಿದ್ದೆವು. ಹಾಯ್ ಬಾಯ್ ಗಳನ್ನು ದಾಟಿ ಮೈಲುಗಟ್ಟಲೇ ಪರಸ್ಪರ ಗಾಢ ಸಂಬಂಧಗಳಲ್ಲಿ ಬೆಸುಗೆಯಾಗುತ್ತಿದ್ದೆವು. ಅನಂತರ ಅಷ್ಟಕ್ಕೂ ನಿಲ್ಲದೇ ಮತ್ತೆ ಮಾತಿಗೆ ರಸ ತುಂಬಿ “ಆ ದೆವ್ವ ಬಡಿದ ಹುಡಿಗಿ ಏನಾದಳು…. ಅದು ಯಾರ ಮನೆಯ ದೆವ್ವ…. ಆ ಹುಂಚೀಗಿಡದಲ್ಲಿ ಇನ್ನೂ ದೆವ್ವಗಳು ಇವೆಯೇ….” ಇತ್ಯಾದಿ ಇತ್ಯಾದಿ ಜನಪದೀಯ ಮಾತುಗಳು ಆರಂಭವಾಗುತ್ತಿದ್ದವು.
ಹೀಗಾಗಿ ಆ ಕಾಲದಲ್ಲಿ ಯಾರಾದರೂ ಸತ್ತರೆ ಊರಿಗೆ ಊರೇ ಅಳುತ್ತಿತ್ತು. ಈ ಕಾಲದಲ್ಲಿ ಸತ್ತರೆ ಮಕ್ಕಳುಕೂಡ ಕಣ್ಣಿಗೆ ಕರ್ಚೀಪು ಒತ್ತಿಕೊಂಡು ನಿಲ್ಲುತ್ತವೆ. ಆ ಭಾವತೀವ್ರತೆ, ಆ ಅಗಾಧತೆ ಇಂದು ಕಾಣಲಾರೆವು.
ಆ ನಮ್ಮ ದಿನಗಳಲ್ಲಿ ಈ ದಿನಗಳ ಮಿಂಚಿನ ವೇಗದ ಸ್ಪಂದನ-ಪ್ರತಿಸ್ಪಂದನಗಳು ಇರಲೇ ಇಲ್ಲ. ಆಗ ಮಾತು ಕಡಿಮೆ , ಪ್ರೀತಿ ಹೆಚ್ಚು …..ಈಗ ಮಾತು ಹೆಚ್ಚು…. ಪ್ರೀತಿ ಲಿಮಿಟೆಡ್ಡು ! ಯಾಕೆಂದರೆ ಇದು ಸ್ಪೀಡ ಯುಗವಲ್ಲವೇ ? ಮಾತೂ ಸ್ಪೀಡು….. ಲವ್ವೂ ಸ್ಪೀಡು….. ಸ್ಪೀಡ ಯುಗದ ಲವ್ವೂ ಸ್ಪೀಡು… ನೋ ಟಾಯಿಮ್ಮು !
ಯಾರ ಮನೆಗಾದರೂ ಈಗ ಹೋಗಬೇಕಾದರೆ ಮೊದಲು ಫೋನ್ ಮಾಡಿ ಅಪಾಯಿಂಟ್‌ಮೆಂಟ್ ತೆಗೆದುಕೊಂಡೇ ಹೋಗಬೇಕು. ಆದರೆ ಆ ಕಾಲದಲ್ಲಿ ಯಾರ ಮನೆಗಾದರೂ ಸರ್ವೋತ್ತಿನಲ್ಲಿ ಹೋದರೂ ಗುಳಿಗಿ ಹುಗ್ಗಿ, ಸ್ಯಾವಿಗಿ, ಬಿಸಿ ಅನ್ನ, ತುಪ್ಪ- ಹಪ್ಳ-ಸೆಂಡಿಗಿ, ನೆಂಚಿಕೊಳ್ಳಲು ಉಪ್ಪಿನಕಾಯಿ- ಖಾರಬ್ಯಾಳಿ ಸಿಕ್ಕೇ ಸಿಗುತ್ತಿತ್ತು.
ಅಯ್ಯಯ್ಯೋ…. ಈಗ ಯಾರಿಗಾದರೂ ಊಟ ಮಾಡಿಸುವದಾದರೆ ನೇರವಾಗಿ ಹೋಟೆಲ್ಲಿಗೆ ಕರೆದುಕೊಂಡು ಹೋಗಿಬಿಡುತ್ತೇವೆ. ಈಗ ಆರ್ಡರ ಕೊಟ್ಟರೆ ರೆಡಿಮೇಡ ಫುಡ್ಡು ಮನೆಗೂ ದೌಡಾಯಿಸಿಬಿಡುತ್ತದೆ. ಅಡಿಗೆ ಮನೆಯ ಆ ಬೆಚ್ಚನೆಯ ಸುಖ ಇನ್ನೆಲ್ಲಿ ?
ಆ ಸಂಬಂಧಗಳು ಒರಟು ಒರಟು, ಆದರೆ ಆಳ ಆಳ. ಇಂದಿನ ಈ ಸಂಬಂಧಗಳು ಸ್ವೀಟೋ ಸ್ವೀಟು….. ನೈಸೋ ನೈಸು….. ಆದರೆ ಇಂದು ಲವ್ವಿಗೂ ಅಪಾಯಿಂಟ್‌ಮೆಂಟ್ ಬೇಕು ! ಇಲ್ಲವಾದರೆ ನೋ ಹನಿ…. ನೋ ಮೂನು…..
ಇಂದಿನ ಸಮಸ್ಯೆಗಳಿಗೆ ಅರ್ಥವಿದೆ. ಇಂದು ನಮ್ಮ ಸುತ್ತಮುತ್ತ ಸಹಸ್ರಮುಖಿಯಾಗಿ ಜೀವನ ಸ್ಪರ್ಧಾತ್ಮಕವಾಗಿ ವಿಸ್ತರಿಸಿದೆ. ಐದು ನಿಮಿಷ ತಡವಾದರೂ ಮುಂದಿನ ಎಲ್ಲ ಕೆಲಸಗಳ ಚೇನ ತಪ್ಪಿ ಹೋಗುತ್ತದೆ.
ಆದರೆ ಕಾಲ ಬದಲಾಗಲಿ…. ಕಲ್ಪ ಬದಲಾಗಲಿ…. ಯುಗ ಬದಲಾಗಲಿ…. ನಮ್ಮ ಭಾರತೀಯ ಗೃಹ ಸಂಸ್ಕೃತಿಯ ಆತಿಥ್ಯ- ಆತ್ಮೀಯತೆಗಳು ಬತ್ತಿ ಹೋಗದಿರಲಿ !
ಆ ಸಂಜೆಯ ಪುಟ್ಟಹುಡಿಗಿ ನಮ್ಮ ಕನಸಿನ ಬುಟ್ಟಿಯನ್ನು ಮತ್ತೆಮತ್ತೆ ತುಂಬಿ ಬರಲಿ….ಬಾಳಿನ ನೋವು ಮರೆಸಲಿ !
(ಲೇಖಕರು – ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ ಕಾಲೊನಿ
ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ
ಬೆಂಗಳೂರ- ೫೬೦೦೮೩
ಮೊ. ೯೯೪೫೭ ೦೧೧೦೮)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ