ದೋಷಪೂರ್ಣ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ದೇವಸ್ಥಾನಗಳನ್ನು ರಕ್ಷಿಸಿ

  ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ

ಪ್ರಗತಿವಾಹಿನಿ ಸುದ್ದಿ, ಮಂಗಳೂರು ರಾಜ್ಯದಲ್ಲಿ ಕೆಲವು ದಿನಗಳಿಂದ ಅನಧಿಕೃತ ದೇವಸ್ಥಾನದ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಚಟುವಟಿಕೆ ಆರಂಭವಾಗಿತ್ತು. ಸದ್ಯ   ಸರಕಾರವು ಇದಕ್ಕೆ ತಾತ್ಕಾಲಿಕ ತಡೆ ನೀಡಿದೆ.

 ಆದರೆ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ನೂರಾರು ವರ್ಷಗಳ ಇತಿಹಾಸವಿರುವ  ಹಿಂದೂ ಧಾರ್ಮಿಕ ಸ್ಥಳಗಳನ್ನು  ಅನಧಿಕೃತವೆಂದು ನಿರ್ಧರಿಸಿ, ದೋಷಪೂರಿತ ಪಟ್ಟಿಯನ್ನು ಮಾಡಿರುವುದು ಗಮನಕ್ಕೆ ಬಂದಿದೆ.   ನ್ಯಾಯಾಲಯವು ದೇವಸ್ಥಾನಗಳನ್ನು ಅಧಿಕೃತ ಮಾಡಲು ಅವಕಾಶ ನೀಡಿರುವಾಗಲೂ, ಅಧಿಕಾರಿಗಳು ತರಾತುರಿಯಿಂದ ದೇವಸ್ಥಾನಗಳನ್ನು ಏಕಾಏಕಿ ಧ್ವಂಸ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ, ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಹೇಳಿದೆ.

ಅಲ್ಲದೇ ಜುಲೈ 1 ರಂದು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ರವಿ ಕುಮಾರ ಇವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ 6 ಸಾವಿರಕ್ಕೂ ಅಧಿಕ ಧಾರ್ಮಿಕ ಸ್ಥಳಗಳಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1579 ಧಾರ್ಮಿಕ ಸ್ಥಳಗಳ ಪಟ್ಟಿ ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರಾಚೀನ ದೇವಸ್ಥಾನಗಳನ್ನು ಸೇರಿಸಲಾಗಿದೆ. ಉದಾಹರಣೆಗೆ ಮಂಗಳೂರಿನ ಶಕ್ತಿ ನಗರದಲ್ಲಿರುವ 800 ವರ್ಷದ ಇತಿಹಾಸ ಇರುವ ವೈದ್ಯನಾಥ ದೈವಸ್ಥಾನವನ್ನು ಸಹ ಅನಧಿಕೃತ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ಪಟ್ಟಿಯನ್ನು ಗಮನಿಸಿದಾಗ, ಪಟ್ಟಿಯು ಆಧಾರ ರಹಿತವಾಗಿದ್ದು, ಅಧಿಕಾರಿಗಳು ತರಾತುರಿಯಲ್ಲಿ ಸ್ಥಳ ತನಿಖೆ ನಡೆಸದೇ ಪಟ್ಟಿ ಮಾಡಿದ್ದಾರೆ ಮತ್ತು ಧಾರ್ಮಿಕ ಸ್ಥಳಗಳು ಯಾವಾಗ ನಿರ್ಮಾಣವಾಯಿತು ಎಂಬುದರ ಬಗ್ಗೆ ಅಧಿಕಾರಿಗಳು ಎಲ್ಲಿಯೂ ಉಲ್ಲೇಖ ಮಾಡದಿರುವುದು ಸಂಶಯಾಸ್ಪದವಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯ ಮತ್ತು ಅಜ್ಞಾನದ ಪರಮಾವಧಿಯಾಗಿದೆ. ಅದಲ್ಲದೇ ತೆರವು ಪಟ್ಟಿಯಲ್ಲಿ ಕೇವಲ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ, ಅನ್ಯ ಮತದವರ ಧಾರ್ಮಿಕ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಉದಾಹರಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೫೭ ಹಿಂದೂ ಧಾರ್ಮಿಕ ಸ್ಥಳಗಳನ್ನು ತೆರವು ಗೊಳಿಸುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರಲ್ಲಿ ೫೭ ಧಾರ್ಮಿಕ ಸ್ಥಳಗಳು ಸಹ ಹಿಂದೂ ಸಮುದಾಯಕ್ಕೆ ಸೇರಿದೆ. ಇದೆಲ್ಲವೂ ಸಂಶಯಾಸ್ಪದವಾಗಿದೆ.
ಹಾಗಾಗಿ ‘ದೋಷಪೂರಿತ ಅನಧಿಕೃತ ಪಟ್ಟಿಯನ್ನು ಕೂಡಲೇ ಪರಿಷ್ಕರಿಸಬೇಕು ಮತ್ತು ದೋಷಪೂರಿತ ಪಟ್ಟಿಯ ಆಧಾರದ ಮೇಲೆ ಧ್ವಂಸ ಮಾಡಿದ ದೇವಾಲಯಗಳ ಪುನರ್‌ನಿರ್ಮಾಣ ಮಾಡಬೇಕು. ಹೊಸದಾಗಿ ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಸ್ಥಳಗಳ ಪಟ್ಟಿಗಳನ್ನು ಸರಕಾರದ ಎಲ್ಲಾ ಜಾಲತಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಬೇಕು ಮತ್ತು ಈ ಪಟ್ಟಿಯನ್ನು ಎಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು  ಮತ್ತು ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಏನಾದರೂ ಆಕ್ಷೇಪವಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಾರ್ವಜನಿಕರಿಗೆ ಸಾಕಷ್ಟು ಸಮಯ ಅವಕಾಶ ನೀಡಬೇಕು, ಎಂದೂ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಬೆಂಗಳೂರು ಜಿಲ್ಲಾಧಿಕಾರಿಗಳಾದ ಮಂಜುನಾಥ್ ರವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿ ಆಗ್ರಹಿಸಿದೆ.  ಈ ಸಂದರ್ಭದಲ್ಲಿ  ನಾ.ರಾ.ಜಯಂತ -ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ,   ನೀಲೇಶ -ಹಿಂದೂ ಜನಜಾಗೃತಿ ಸಮಿತಿ, ನ್ಯಾಯವಾದಿ ಗಂಗಾಧರ – ಹಿಂದೂ ವಿಧಿಜ್ಞ ಪರಿಷತ್,  ರಮೇಶ ಶೆಟ್ಟಿ – ರಾಮಸೇನಾ ಬೆಂಗಳೂರು ಅಧ್ಯಕ್ಷರು, ಡಾ. ಗುರುಪ್ರಸಾದ್ – ಸಾಮಾಜಿಕ ಕಾರ್ಯಕರ್ತ ,  ಜಯಪ್ರಕಾಶ್ – ಭಾರತ ಪುನರುತ್ಥಾನ ಟ್ರಸ್ಥ ನಿಂದ ಉಪಸ್ಥಿತರಿದ್ದರು.

ಅಧಿಕಾರಿಗಳು, ನೌಕರರಿಗೆ ಸರಕಾರದಿಂದ ಗಂಭೀರ ಎಚ್ಚರಿಕೆ; ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಿ ಸುತ್ತೋಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button