ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ನಗರ ಉಸ್ತುವಾರಿಗಾಗಿ ಸಚಿವರಿಬ್ಬರ ನಡುವೆ ಕಾದಾಟ ಆರಂಭವಾಗಿದ್ದು, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಗರಂ ಆಗಿದ್ದಾರೆ.
ಬೆಂಗಳೂರು ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದನ್ನು ಸಿಎಂ ಬೊಮ್ಮಾಯಿ ಅವರು ಜೇಷ್ಠತೆ ಪರಿಗಣಿಸಿ ನೀಡಬೇಕು. ನಾನು 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಬೆಂಗಳೂರು ಉಸ್ತುವಾರಿ ಸಿಎಂ ಬಳಿಯೇ ಇದ್ದರೆ ನನ್ನದೇನೂ ಅಭ್ಯಂತರವಿಲ್ಲ ಆದರೆ ಬೇರೆಯವರಿಗೆ ಕೊಡುವುದಾದರೆ ನನ್ನನ್ನೂ ಪರಿಗಣಿಸಿ ಎಂದು ಹೇಳಿದ್ದೇನೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಇದೇ ವೇಳೆ ಸಚಿವ ಆರ್.ಅಶೋಕ್ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ ಸೋಮಣ್ಣ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಅಶೋಕ್ ಶಾಸಕ ಕೂಡ ಆಗಿರಲಿಲ್ಲ. ವಸತಿ ಇಲಾಖೆಯಿಂದ ಮನೆ ಹಂಚಿಕೆ ಕುರಿತು ಸಭೆ ಕರೆದರೆ ಸಭೆಗೂ ಬರಲ್ಲ, ನನ್ನ ಇಲಾಖೆ ಮನೆಗಳನ್ನು ಕೊಡಲು ನಾನು ಬೇರೆಯವರನ್ನು ಕೇಳಬೇಕಿಲ್ಲ. ಸಭೆಗೆ ಬಾರದಿದ್ದರೆ ಅವರಿಗೆ ಲಾಸ್. ನಾನು ಅವರು ಕರೆದ ಸಭೆಗೂ ಹೋಗುತ್ತೆನೆ. ನನಗೆ ಯಾವ ದುರಹಂಕಾರವೂ ಇಲ್ಲ.. ಆದರೆ ಅಶೋಕ್ ಸಾಮ್ರಾಟನಂತೆ ಆಡುತ್ತಿದ್ದಾರೆ….ಚಕ್ರವರ್ತಿ ಕೆಲಸವೇ ಬೇರೆ ನನ್ನ ಕೆಲಸವೇ ಬೇರೆ ಎಂದು ಗುಡುಗಿದರು.
ಬೆಂಗಳೂರು ಉಸ್ತುವಾರಿ ನೀಡುವಾಗ ಯಾರ ಅನುಭವವೇನು ಎಂಬುದನ್ನು ನೋಡಬೇಕು. ಉಸ್ತುವಾರಿ ನನಗೆ ಕೊಟ್ಟರೆ ಅತ್ಯುತ್ತಮವಾಗಿ ನಿಭಾಯಿಸುತ್ತೇನೆ ಎಂದು ಸಿಎಂಗೆ ಹೇಳಿದ್ದೇನೆ. ಇಲ್ಲವಾದರೆ ಬೆಂಗಳೂರು ಉಸ್ತುವಾರಿಯನ್ನು ನನಗೆ ಹಾಗೂ ಆರ್.ಅಶೋಕ್ ಇಬ್ಬರಿಗೂ ನೀಡಲಿ. ಉಸ್ತುವಾರಿಕೆಯಲ್ಲಿ ವಿಭಾಗವನ್ನಾಗಿ ಮಾಡಿ ಜವಾಬ್ದಾರಿ ಕೊಡಲಿ ಎಂದರು.
ಒಟ್ಟಿನಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ಬೆಂಗಳೂರು ನಗರ ಉಸ್ತುವಾರಿ ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗುತ್ತೆ. ಎಲ್ಲವೂ ಸಿಎಂ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವಸಂಪುಟ ಸಭೆಯಲ್ಲಿ ಚರ್ಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣವೇನು ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ