ದೀಪಾವಳಿಯಂದು ದೇವಾಲಯಗಳಲ್ಲಿ ಗೋಪೂಜೆ
ಬಲಿಪಾಡ್ಯಮಿ ದಿನ ಸಂಜೆ 5.30ರಿಂದ 6.30ರ ಸಮಯದಲ್ಲಿ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ಅರಿಶಿಣ, ಕುಂಕುಮ, ಹೂವುಗಳಿಂದ ಪೂಜಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸಿಗಳ ಗೋಗ್ರಾಸಗಳನ್ನು ಹಸುಗಳಿಗೆ ನೀಡಿ ಆರಾಧಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾದ ಗೋವುಗಳ ಮಹತ್ವ ಹಾಗೂ ಗೋವುಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ನ. 5ರ ಬಲಿಪಾಡ್ಯಮಿಯಂದು ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋಮಾತೆಯನ್ನು ಪೂಜಿಸಿ ಆರಾಧಿಸಲು ಆದೇಶಿಸಲಾಗಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವರಾದ ಶಶಿಕಲಾ ಅ. ಜೊಲ್ಲೆ ತಿಳಿಸಿದ್ದಾರೆ.
ಹಿಂದೂ ಧರ್ಮದ ಪುರಾಣ, ಉಪನಿಷತ್ತುಗಳಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಹಸು ಅಂದರೆ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆ ವಾಸ್ತುದೋಷಕ್ಕೂ ಪರಿಹಾರ ದೊರೆಯುವುದೆಂಬ ನಂಬಿಕೆ ನಮ್ಮ ಸಮಾಜದಲ್ಲಿರುವುದರಿಂದ ಬಲಿಪಾಡ್ಯಮಿ ದಿನದಂದು ಇಲಾಖೆಯ ದೇವಾಲಯಗಳಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀಮದ್ ಭಗವದ್ಗೀತೆ, ಭಾಗವತ ಮಹಾಪುರಾಣ ಸೇರಿದಂತೆ ಹಲವಾರು ಮಹಾಪುರಾಣಗಳಲ್ಲಿ ಗೋವುಗಳ ಮಹತ್ವವನ್ನು ಉಲ್ಲೇಖಿಸಲಾಗಿದೆ. ಭಗವದ್ ಶ್ರೀಕೃಷ್ಣ ಪರಮಾತ್ಮನು ಗೋವರ್ಧನಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ಹಿಡಿದು ಗೋವುಗಳ ಸಂರಕ್ಷಣೆ ಮತ್ತು ಅವುಗಳ ಪಾಲನೆ ಪೋಷಣೆ ಮಾಡುತ್ತಿದ್ದನೆಂದು ಹಾಗೆಯೇ ಗೋವುಗಳಿಗೆ ಪೂಜಾದಿಗಳನ್ನು ನಡೆಸಿ ಅವುಗಳ ರಕ್ಷಣೆಯೊಂದಿಗೆ ಉತ್ತಮ ಫಲಗಳನ್ನು ಪಡೆದನೆಂದು ಹೇಳಲಾಗಿದೆ. ಗೋವುಗಳಲ್ಲಿ ದೇವಾನುದೇವತೆಗಳು ನೆಲೆಸಿದ್ದಾರೆಂಬ ನಂಬಿಕೆ ಹಿಂದೂ ಸಮಾಜದ್ದಾಗಿದ್ದು, ಅನಾದಿಕಾಲದಿಂದಲೂ ಗೋಮಾತೆಯನ್ನು ಪೂಜೆ ಮಾಡುತ್ತಿದ್ದಾರೆ. ಹಾಗೆಯೇ ದೀಪಾವಳಿಯ ಬಲಿಪಾಡ್ಯಮಿಯ ದಿನ ಹಸುಗಳನ್ನು ಸ್ನಾನ ಮಾಡಿಸಿ ಹರಿಶಿಣ, ಕುಂಕುಮ, ಬಗೆಬಗೆಯ ಹೂವುಗಳಿಂದ ಪೂಜಿಸಿ ಅಲಂಕರಿಸಿ ಅಕ್ಕಿ, ಬೆಲ್ಲ ಸಿಹಿ ತಿನಿಸುಗಳೊಂದಿಗೆ ಆರಾಧನೆ ಮಾಡುವುದನ್ನು ಕಾಣಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ದೊಡ್ಡ ದೊಡ್ಡ ಮಹಾನಗರಗಳಲ್ಲಿ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆ ಗೋಪೂಜೆಯಂತಹ ಪವಿತ್ರ ಕೆಲಸವನ್ನು ಮರೆಯುತ್ತಿದ್ದಾರೆ. ಸನಾತನ ಧರ್ಮದ ಗೋಮಾತೆಯ ಪೂಜೆಯನ್ನು ಪೂಜಿಸುವ ಸಂಪ್ರದಾಯ ನಮ್ಮ ಮುಂದಿನ ಪೀಳಿಗೆಗೂ ಗೊತ್ತಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಈ ಸತ್ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಲು ವರ್ಷದಲ್ಲಿ ಒಂದು ದಿನ ಇಲಾಖೆಯ ದೇವಾಲಯಗಳಲ್ಲಿ ಪೂಜಿಸುವುದನ್ನು ಕಡ್ಡಾಯ ಮಾಡುವುದರಿಂದೊಂದಿಗೆ ಗೋಮಾತೆಯ ಪೂಜೆಯನ್ನು ಪರಿಚಯಿಸಲು ಬಲಿಪಾಡ್ಯಮಿ ದಿನ ಸೂಕ್ತವಾಗಿರುವುದರಿಂದ ಆ ದಿನದಂದು ಗೋಪೂಜೆ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಸಚಿವೆ ಶ್ರೀಮತಿ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಲಿಪಾಡ್ಯಮಿ ದಿನ ಸಂಜೆ 5.30ರಿಂದ 6.30ರ ಸಮಯದಲ್ಲಿ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ಅರಿಶಿಣ, ಕುಂಕುಮ, ಹೂವುಗಳಿಂದ ಪೂಜಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸಿಗಳ ಗೋಗ್ರಾಸಗಳನ್ನು ಹಸುಗಳಿಗೆ ನೀಡಿ ಆರಾಧಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಗೋವುಗಳ ಮಹತ್ವದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗೋವುಗಳ ರಕ್ಷಣೆ ಸಂಬಂಧದಲ್ಲಿ ಗೋಸಂರಕ್ಷಣಾ ಕಾಯ್ದೆ-2021ರನ್ನು ಅನುಷ್ಠಾನಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ