ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ನಟ ಪುನೀತ್ ರಾಜಕುಮಾರ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಅವರ ಕುಟುಂಬ ವೈದ್ಯ ಡಾ.ರಮಣರಾವ್ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಡಾ.ರಮಣ ರಾವ್ ಅವರು ಸರಿಯಾಗಿ ಪ್ರಾಥಮಿಕ ಚಿಕಿತ್ಸೆ ನೀಡದಿರುವುದೇ ಪುನೀತ್ ಸಾವಿಗೆ ಕಾರಣ ಎಂದು ಅಭಿಮಾನಿಗಳು ಮತ್ತು ಕೆಲವು ಕನ್ನಡ ಸಂಘಟನೆಗಳು ಆರೋಪಿಸಿದ್ದು, ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.
ಪುನೀತ್ ಅವರಿಗೆ ತಕ್ಷಣಕ್ಕೆ ಬೇಕಾದ ಔಷಧಗಳನ್ನು ನೀಡಲಿಲ್ಲ. ಅಂಬುಲೆನ್ಸ್ ನಲ್ಲಿ ವಿಕ್ರಂ ಆಸ್ಪತ್ರೆಗೆ ಕಳಿಸಲಿಲ್ಲ. ರಮಣರಾವ್ ಆಸ್ಪತ್ರೆಯಿಂದ ಪುನೀತ್ ಅವರನ್ನು ಎತ್ತಿಕೊಂಡು ಹೋಗಲಾಗಿದೆ. ಅಂತಹ ಸ್ಥಿತಿ ಇದ್ದರೂ ಅಲ್ಲೇ ಚಿಕಿತ್ಸೆ ಕೊಡದೆ ಕಾರಿನಲ್ಲಿ ಕಳಿಸಿಕೊಡಲಾಗಿದೆ ಎನ್ನುವುದು ಅಭಿಮಾನಿಗಳ ಆರೋಪ.
ಆದರೆ ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ರಮಣ ರಾವ್, ನನ್ನ ಮಗನಾಗಿದ್ದರೂ ನಾನು ಇದೇ ಚಿಕಿತ್ಸೆ ನೀಡುತ್ತಿದ್ದೆ. ಅಂಬುಲೆನ್ಸ್ ತರಿಸಿ ಕಳಿಸುವುದು ತಡವಾಗುತ್ತದೆ ಎನ್ನುವ ಕಾರಣಕ್ಕೇ ನಾನು ಕಾರಿನಲ್ಲಿ ಕಳಿಸಿದ್ದೆ. ತಕ್ಷಣಕ್ಕೆ ಏನು ಬೇಕೋ, ಏನೇನು ಮಾಡಬಹುದೋ ಅದನ್ನೆಲ್ಲ ಮಾಡಲಾಗಿದೆ. ನನ್ನದು ಸಣ್ಣ ಕ್ಲಿನಿಕ್ ಅಷ್ಟೆ. ಇಲ್ಲಿ ಹೆಚ್ಚಿನ ಚಿಕಿತ್ಸೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ವಿಕ್ರಂ ಆಸ್ಪತ್ರೆಗೆ ಕಳಿಸಲಾಗಿದೆ. ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ತಿಳಿಸಿದ್ದಾರೆ.
ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ; ಪುನೀತ್ ಅಭಿಮಾನಿಗಳಿಗೆ ರಾಘಣ್ಣ ಮನವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ