ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:
ಚಿಕ್ಕೋಡಿಯಲ್ಲಿ ಎಪ್ರಿಲ್ 18ರಂದು ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಮಾವೇಶವನ್ನು ಘಟಪ್ರಭಾದಲ್ಲಿ ನಡೆಸಲು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಂಸದ ಸುರೇಶ ಅಂಗಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಬಿಜೆಪಿ ಮುಖಂಡ ಈರಣ್ಣ ಕಡಾಡಿ ಘಟಪ್ರಭಾಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಘಟಪ್ರಭಾ ಆರೋಗ್ಯಧಾಮದ ಆಡಳಿತ ಮಂಡಳಿ ಸದಸ್ಯರೊಂದಿಗೂ ಚರ್ಚಿಸಿದರು. ಆಡಳಿತ ಮಂಡಳಿಯ ಟ್ರಸ್ಟಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಘನಶ್ಯಾಮ ವೈದ್ಯರ ಜೊತೆ ಚರ್ಚೆ ಮಾಡಿದರು.
ಕರ್ನಾಟಕ ಆರೋಗ್ಯ ಧಾಮ ರಾಜಕೀಯ ಹೊರತಾಗಿರುವುದರಿಂದ ತಮ್ಮ ಒಪ್ಪಿಗೆಯನ್ನು ನೀಡಲಿಲ್ಲ ಹಾಗೂ ಈ ಬಗ್ಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರಿಂದ ಬಿಜೆಪಿ ಮುಖಂಡರು ವಾಪಸ್ ತೆರಳಿದ್ದಾರೆ.
ಈ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ ಘಟಪ್ರಭಾ ಚಿಕ್ಕೋಡಿ ಮತ್ತು ಬೆಳಗಾವಿಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಕ್ಕೆ ಹತ್ತಿರವಾಗಿರುವುದರಿಂದ ಹಾಗೂ ಮೋದಿಯವರು ಇನ್ನು ಗೋಕಾಕ ತಾಲೂಕಿಗೆ ಬಾರದ ಕಾರಣ ಘಟಪ್ರಭಾದಲ್ಲಿ ಕಾರ್ಯಕ್ರಮ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೆಎಚ್ಐ ಆಡಳಿತ ಮಂಡಳಿಯವರು ನಾಳೆ ನಿರ್ಧಾರವನ್ನು ತಿಳಿಸುವುದಾಗಿ ಎಂದು ಹೇಳಿದ್ದಾರೆ ಎಂದು ಹೇಳಿದರು.
ಸಂಸದ ಸುರೇಶ ಅಂಗಡಿಯವರು ಮಾತನಾಡಿ, ಕಳೆದ ಬಾರಿ ನೀಡಿದ ಕೆಲವು ಭರವಸೆ ನಮ್ಮಿಂದ ಈಡೇರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಲ್ಲಾ ಭರವಸೆಯನ್ನು ಈಡೇರಿಸುತ್ತೇವೆ ಮತ್ತು ಮೋದಿ ಕಾರ್ಯಕ್ರಮಕ್ಕಾಗಿ ಇನ್ನು ಕೆಲವು ಸ್ಥಳವನ್ನು ಪರೀಶಿಲಿಸುತ್ತಿದ್ದೇವೆ. ಕೆಎಚ್ಐ ಸೂಕ್ತ ಸ್ಥಳವಾಗಿದ್ದರಿಂದ ಅವಕಾಶ ನೀಡಲು ವಿನಂತಿಸಿ ಕೊಂಡಿದ್ದೇವೆ. ಅವರು ಒಪ್ಪಿಗೆ ನೀಡಿದರೆ ಭದ್ರತಾ ತಂಡ ಬಂದು ಸ್ಥಳವನ್ನು ಪರೀಶಿಲಿಸಿ ಒಪ್ಪಿಗೆ ಸೂಚಿಸಿದರೆ ದಿ.18ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಘಟಪ್ರಭಾದಲ್ಲಿ ನೆರವೇರಿಸುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುರೇಶ ಪಾಟೀಲ, ಸುರೇಶ ಕಾಡದವರ, ವಿರುಪಾಕ್ಷಿ ಎಲಿಗಾರ ಸೇರಿ ಹಲವಾರು ಮುಖಂಡರು ಹಾಜರಿದ್ದರು.