ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಾಗರಿಕ ಪ್ರಪಂಚವೇ ತಲೆ ತಗ್ಗಿಸುವಂತ ಘೋರ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕೋಪಗೊಂಡಿದ್ದ ತಂದೆಯೊಬ್ಬ ಮಗಳ ಮೇಲೆಯೇ ಅತ್ಯಾಚಾರವೆಸಗಿರುವ ಹೇಯ ಘಟನೆ ನಡೆದಿದೆ.
ಮಗಳ 8 ತಿಂಗಳ ಮಗು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮಗುವಿನ ಅಂತ್ಯಕ್ರಿಯೆಗೆಂದು ಮಗಳನ್ನು ಕಾಡಿನ ಸಮೀಪ ಕರೆದೊಯ್ದ ತಂದೆ ಅಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಮಗಳನ್ನು ಹತ್ಯೆ ಮಾಡಿದ್ದಾನೆ.
ಈ ಕುರಿತು ರಾಟಿಬಾದ್ ಠಾಣೆ ಅಧಿಕಾರಿ ಸುದೇಶ್ ತಿವಾರಿ ವಿವರಿಸಿದ್ದು, ಸಂಸಗಡ್ ಅರಣ್ಯ ಪ್ರದೇಶದಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿತ್ತು. ತನಿಖೆ ಬಳಿಕ ಮಹಿಳೆ ಸೆಹೋರ್ ಜಿಲ್ಲೆಯ ಬಿಲ್ಕಿಸ್ ಗಂಜ್ ನವರು ಎಂದು ತಿಳಿದುಬಂದಿದೆ. ಕುಟುಂಬದವರನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಅನ್ಯ ಜಾತಿ ಯುವಕನೊಬ್ಬನನ್ನು ಮಗಳು ಪ್ರೀತಿಸಿದ್ದಳು. ವಿವಾಹಕ್ಕೆ ಮನೆಯವರು ಒಪ್ಪಿರಲಿಲ್ಲ. ಇದರಿಂದ ಓಡಿಹೋಗಿ ಮದುವೆಯಾಗಿದ್ದ ಮಗಳು ಕೆಲ ವರ್ಷ ತವರು ಮನೆಗೂ ಬಂದಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ತನ್ನ ಅಕ್ಕನ ಮನೆಗೆ ತನ್ನ 8 ತಿಂಗಳ ಮಗುವಿನೊಂದಿಗೆ ಬಂದಿದ್ದಳು. ಆದರೆ ಅನಾರೋಗ್ಯಕ್ಕೀಡಾಗಿದ್ದ ಮಗು ಸಾವನ್ನಪ್ಪಿತ್ತು. ಇದರಿಂದ ಅಕ್ಕ ತನ್ನ ತಂದೆಗೆ ವಿಷಯ ತಿಳಿಸಿದ್ದಳು.
ಅಕ್ಕನ ಮನೆಗೆ ಬಂದ ತಂದೆ ಮಗುವಿನ ಅಂತ್ಯಕ್ರಿಯೆಗೆಂದು ಮಗಳನ್ನೂ ಕರೆದುಕೊಂಡು ಅರಣ್ಯಕ್ಕೆ ಹೋಗಿದ್ದ. ಅರಣ್ಯ ಪ್ರದೇಶದಲ್ಲಿ ಮಗಳ ಮೇಲೆ ಅತ್ಯಾಚಾರವೆಸಗಿರುವ ತಂದೆ ಬಳಿಕ ಆಕೆಯನ್ನು ಹತ್ಯೆ ಮಾಡಿ ಮನಗೆ ವಾಪಸ್ ಆಗಿದ್ದ. ಪ್ರಕರಣ ಸಂಬಂಧ 55 ವರ್ಷದ ಆರೋಪಿ ತಂದೆಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ನದಿಗೆ ಉರುಳಿದ ಬೆಂಗಾವಲು ವಾಹನ; ಇಬ್ಬರು ಪೊಲೀಸ್ ಅಧಿಕಾರಿಗಳ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ