Kannada NewsLatest

ಅಥಣಿ ತಾಲೂಕಿನ ಅಕ್ರಮ ಮರಳುಗಾರಿಕೆಗೆ ತಡೆ ಯಾವಾಗ ?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮರಳು ಯಾರಿಗೆ ತಾನೇ ಬೇಡ ಹೇಳಿ. ಸರ್ಕಾರದ ಕಾಮಗಾರಿಗಳಿಂದ ಹಿಡಿದು ಬಡವರ್ಗದ ಜನರು ಮನೆ ಕಟ್ಟೋಕೆ ಮರಳು ಅತ್ಯವಶ್ಯಕ ನೈಸರ್ಗಿಕ ಸಂಪನ್ಮೂಲವಾಗಿದೆ. ಆದರೆ ಇದೀಗ ಮರಳಿನ ಕೃತಕ ಅಭಾವ ಸೃಷ್ಟಿಸಿ ಮರಳಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಅದೆಷ್ಟೋ ಕುಳಗಳು, ನದಿ, ಹಳ್ಳಗಳನ್ನು ಬಗೆದು, ಲೋಡ್‌ಗಟ್ಟಲೇ ಹಗಲು- ರಾತ್ರಿ ಎನ್ನದೆ ಮರಳು ಸಾಗಾಟ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಇದಕ್ಕೆ ತಡೆ ನೀಡುವವರು ಯಾರು ಇಲ್ಲದಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯುವಂತಹ ಪರಿಸ್ಥಿತಿ ಉಂಟಾಗಿದೆ. ಅಕ್ರಮ ಮರಳುಗಾರಿಕೆ ಬಗ್ಗೆ ಹಲವು ಸಾರಿ ದೂರು ನೀಡಿದರು ಇನ್ನು ನಿಂತಿಲ್ಲ.

ತಾಲೂಕಿನ ಅಬ್ಬಿಹಾಳ, ಮಾಯಣಟ್ಟಿ, ಶಿವನೂರ, ಸಂಬರಗಿ, ನಾಗನೂರ, ತಾಂವಶಿ, ಕಲ್ಲೂತಿ, ಶಿರೂರ ಗ್ರಾಮಗಳಲ್ಲಿ ಹಾದು ಹೋಗುವ ಆಗ್ರಾನಿ ನದಿಯಲ್ಲಿ ಸುಮಾರು ವರ್ಷಗಳಿಂದ ಮೌಲ್ಯಯುತವಾದ ಮಣ್ಣು ಹಾಗೂ ಮರಳು ನೆರೆ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡಿ ಸರಕಾರದ ಬೊಕ್ಕಸಕ್ಕೆ ಇನ್ನಿಲ್ಲದ ನಷ್ಟವಾಗುವಂತಾಗಿದೆ. ಇದಕ್ಕೆ  ಅಧಿಕಾರಿಗಳು ಸಾಥ್ ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರದ ಖಜಾನೆಯಲ್ಲಿ ಹಣವಿಲ್ಲದೆ ಸಾಕಷ್ಟು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಹಲವು ಇಲಾಖೆಯ ನೌಕರರ ಸಂಬಳ ಕೂಡ ಆಗಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುವಂತಹ ಮರಳು ಮಾಫಿಯಾ ವಿರುದ್ಧ ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದೇ ನೋಡಿಯೂ ನೋಡದಂತ ಇರುವುದು ಸಂಶಯಕ್ಕೆ ಎಡೇ ಮಾಡಿದೆ. ಅಕ್ರಮ ತಡೆಯಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ.

ಹಗಲು ಹೊತ್ತಿನಲ್ಲಿಯೇ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದ ಮಾಹಿತಿ ನೀಡಿದರೂ ಸ್ಥಳಕ್ಕೆ ಆಗಮಿಸದೇ ಅಧಿಕಾರಿಗಳು ಮರಳು ಮಾರಾಟಗಾರರೊಂದಿಗೆ ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಮಂಟೂರ ಬಯೋಡೀಸಲ್ ಘಟಕದ ಮೇಲೆ ತಹಸಿಲ್ದಾರ ದಾಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button