Kannada NewsKarnataka NewsLatest

ಖಾನಾಪುರದಲ್ಲಿ ಕವಟಗಿಮಠ ಪರ ಪುತ್ರ ಶರತ್, ಮಾಜಿ ಶಾಸಕ ಅರವಿಂದ ಪಾಟೀಲ ಮತಯಾಚನೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದಲ್ಲಿ ಮಂಗಳವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಮತದಾರರ ವಿಶೇಷ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಅವರ ತಾಲೂಕಿನ ಮಾಜಿ ಶಾಸಕ ಅರವಿಂದ ಪಾಟೀಲ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಮತಯಾಚಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಹಾಂತೇಶ ಕವಟಗಿಮಠ ಅವರ ಪುತ್ರ ಶರತ್, ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ತಮ್ಮ ತಂದೆ ವಿಶೇಷ ಅಧ್ಯಯನವನ್ನ ನಡೆಸಿ ಈ ಸಮಸ್ಯೆಗಳನ್ನು ವಿಧಾನ ಮಂಡಳದ ಅಧಿವೇಶನದಲ್ಲಿ ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ. ತಾಲೂಕಿನ ಕಾನನದಂಚಿನ ಗ್ರಾಮಗಳಿಗೆ ಸಂಪರ್ಕ ರಸ್ತೆ, ಸೇತುವೆ, ಸಾರಿಗೆ, ಶಿಕ್ಷಣ, ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಅನೇಕ ಬಾರಿ ಸದನದಲ್ಲಿ ಚರ್ಚಿಸಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನಾಗಿರುವ ಅವರು ಸದನದಲ್ಲಿ ಉತ್ತಮ ವಾಗ್ಮಿ ಎಂದು ಗುರುತಿಸಿಕೊಂಡಿದ್ದಾರೆ. ಗ್ರಾಪಂ ಸದಸ್ಯರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು ನೊಂದವರ ನೋವಿಗೆ ಸದಾ ಮಿಡಿಯುವ ಮನೋಭಾವವನ್ನು ಹೊಂದಿದ್ದು, ಈ ಸಲದ ಚುನಾವಣೆಯಲ್ಲಿ ಅವರ ಬೆಂಬಲಕ್ಕೆ ಇಡೀ ತಾಲೂಕಿನ ಮತದಾರರು ನಿಲ್ಲಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ತಾವು ಶಾಸಕರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ತಾಲೂಕಿನ ಕಾನನದಂಚಿನ ಕುಗ್ರಾಮಗಳ ಸಮಸ್ಯೆಗಳ ಬಗ್ಗೆ ತಾವು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರೆ, ಇದೇ ವಿಷಯವನ್ನು ಕವಟಗಿಮಠ ಅವರು ವಿಧಾನ ಪರಿಷತ್‌ನಲ್ಲಿ ಪ್ರಸ್ತಾವಿಸುತ್ತಿದ್ದರು. ಕವಟಗಿಮಠ ಅವರ ಪ್ರಯತ್ನದ ಪರಿಣಾಮ ಇಂದು ಕಣಕುಂಬಿ, ಜಾಂಬೋಟಿ, ಲೋಂಡಾ ಅರಣ್ಯದ ಮತ್ತು ಭೀಮಗಡ ವನ್ಯಧಾಮ ವ್ಯಾಪ್ತಿಯ ಬಹುತೇಕ ಗ್ರಾಮಗಳಿಗೆ ರಸ್ತೆ, ಸೇತುವೆ, ಬಸ್, ಕುಡಿಯುವ ನೀರು ಸರಬರಾಜು, ಶಾಲೆ, ಅಂಗನವಾಡಿ ಮತ್ತಿತರ ಮೂಲಭೂತ ಸೌಕರ್ಯಗಳು ಲಭಿಸಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಮುಖಂಡರಾದ ಜ್ಯೋತಿಬಾ ರೇಮಾಣಿ, ಜಾರ್ಡನ್ ಗೋನ್ಸಾಲ್ವಿಸ್, ವಿಠ್ಠಲ ಪಾಟೀಲ, ಮಹಾಬಳೇಶ್ವರ ಚವಲಗಿ, ಮಾರುತಿ ಟಕ್ಕೇಕರ, ದರ್ಶನ ಕಿಲಾರಿ, ಪಂಡಿತ ಓಗಲೆ, ಮಹಾರುದ್ರಯ್ಯ ಹಿರೇಮಠ, ಸಯ್ಯಾಜಿ ಪಾಟೀಲ, ಅಶೋಕ ಪಾಟೀಲ, ಕಾಂಗ್ರೆಸ್ ಮುಖಂಡ ಮಹೇಶ ಪಾಟೀಲ, ಉದ್ಯಮಿ ಜ್ಯೋತಿಬಾ ಭರಮಪ್ಪನವರ, ಮಾಜಿ ಜಿಪಂ ಸದಸ್ಯ ಅರ್ಜುನ ಗಾಳಿ ಸೇರಿದಂತೆ ಗ್ರಾಪಂ ಸದಸ್ಯರು ಮತ್ತು ವಿವಿಧ ಗ್ರಾಮಗಳ ನಾಗರಿಕರು ಇದ್ದರು.
ವಿಠ್ಠಲ ಹಿಂಡಲಕರ್ ಸ್ವಾಗತಿಸಿದರು. ನಾಗೇಂದ್ರ ಚೌಗುಲಾ ನಿರೂಪಿಸಿದರು. ಮಲ್ಲಪ್ಪ ಮಾರಿಹಾಳ ವಂದಿಸಿದರು.

 

ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button