Kannada NewsKarnataka NewsLatest
ಯಾರನ್ನೂ ಸೋಲಿಸಲೆಂದು ನಾನು ನಿಂತಿಲ್ಲ, ನಾನು ಗೆಲ್ಲಬೇಕೆಂದು ನಿಂತಿದ್ದೇನೆ – ಚನ್ನರಾಜ ಹಟ್ಟಿಹೊಳಿ
ವ್ಯವಸ್ಥಿತ ಪ್ರಚಾರ: ಗೆಲ್ಲುವ ವಿಶ್ವಾಸ -ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಡೀ ಜಿಲ್ಲೆಯಲ್ಲಿ ನಮ್ಮ ಪಕ್ಷದ ಎಲ್ಲ ಮುಖಂಡರೊಂದಿಗೆ ನಾವು ವ್ಯವಸ್ಥಿತವಾಗಿ ಪ್ರಚಾರ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷದ ಮೇಲೆ, ನಮ್ಮೆಲ್ಲ ಮುಖಂಡರ ಮೇಲೆ ಹಾಗೂ ನನ್ನ ಮೇಲೆ ಎಲ್ಲೆಡೆ ಪ್ರೀತಿ, ವಿಶ್ವಾಸ ಕಂಡು ಬಂದಿದ್ದು, ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ನನ್ನ ಗೆಲುವು ಖಚಿತ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕಿತ್ತೂರು ಕ್ಷೇತ್ರದ ವಿವಿಧ ಭಾಗಗಳನ್ನು ಮತಯಾಚನೆ ಮಾಡಿ ಅವರು ಮಾತನಾಡುತ್ತಿದ್ದರು. ವನ್ನೂರ, ನೇಸರಗಿ ಮೇಕಲಮರಡಿ, ಹಣಬರಟ್ಟಿ, ದೇಸೂರ ಮುಂತಾದ ಗ್ರಾಮಗಳಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಆಶೀರ್ವದಿಸಿ ಎಂದು ಅವರು ವಿನಂತಿಸಿದರು.
ಜಿಲ್ಲೆಯ ಮತದಾರರು ಸ್ವಾಭಿಮಾನಿಗಳು. ಎಲ್ಲಿ ಹೋದರು ಸಹೋದರನ ರೀತಿಯಲ್ಲಿ ನನ್ನನ್ನು ಕಾಣುತ್ತಿದ್ದಾರೆ. ನನ್ನನ್ನು ಆರಿಸಿಕಳುಹಿಸಿದರೆ ನಿಜವಾಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಅವರಲ್ಲಿ ಬಂದಿದೆ. ಕಾಂಗ್ರೆಸ್ ಪಕ್ಷದ ಸಾಧನೆ, ಕೊಡುಗೆಗಳ ಕುರಿತು ಜನರಲ್ಲಿ ಸ್ಪಷ್ಟ ಕಲ್ಪನೆ ಇದೆ. ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು, ಶಾಸಕರು, ಮುಖಂಡರು ಜನರೊಂದಿಗೆ ನಿರಂತರ ಸಂಪರ್ಕ ಇಟ್ಟಿಕೊಂಡಿದ್ದಾರೆ. ಕೇವಲ ಚುನಾವಣೆಯ ಸಂದರ್ಭದಲ್ಲಿ ಬರುವರು ನಾವಲ್ಲ, ಸದಾ ಜನರೊಂದಿಗಿರುತ್ತೇವೆ ಎನ್ನುವ ಭಾವನೆ ಜನರಲ್ಲಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ನಾವು ಎಲ್ಲೂ ಅನಗತ್ಯವಾಗಿ ಯಾರನ್ನೂ ಟೀಕೆ ಮಾಡಿಲ್ಲ, ಆರೋಪಗಳನ್ನು ಮಾಡಿಲ್ಲ. ಯಾರನ್ನೂ ಸೋಲಿಸಲೆಂದು ನಾನು ನಿಂತಿಲ್ಲ. ನಾನು ಗೆಲ್ಲಬೇಕೆಂದು ನಿಂತಿದ್ದೇನೆ. ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕೆಂದು ನಿಂತಿದ್ದೇನೆ. ನಾವು ಕಾಂಗ್ರೆಸ್ ಸೋಲಿಸಲೆಂದೇ ನಿಂತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಉದ್ದೇಶವೇನೆಂದು ಅರ್ಥ ಮಾಡಿಕೊಳ್ಳುವಷ್ಟು ಜನರು ಬುದ್ದಿವಂತರಿದ್ದಾರೆ ಎಂದು ಅವರು ತಿಳಿಸಿದರು.
ಮತದಾನ ಅತ್ಯಂತ ಪವಿತ್ರವಾದುದು. ಮೊದಲ ಪ್ರಾಶಸ್ತ್ಯದ ಮತದ ಮೂಲಕ ನನ್ನನ್ನು ಆಯ್ಕೆ ಮಾಡಿ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಾನು ನಡೆದುಕೊಳ್ಳುತ್ತೇನೆ. ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಂಕಕಲ್ಪ ಮಾಡಿದ್ದೇನೆ. ನಿಮ್ಮ ಮನೆಯ ಮಗನಾಗಿ ಇರುತ್ತೇನೆ ಎಂದು ಜನರಿಗೆ ಭರವಸೆ ನೀಡುತ್ತಿದ್ದೇನೆ ಎಂದು ಚನ್ನರಾಜ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಮತದಾರರನ್ನು ಸಂಪರ್ಕಿಸಿ ಅವರ ವಿಶ್ವಾಸಗಳಿಸುತ್ತಿದ್ದಾರೆ. ಹಾಗಾಗಿ 2023ರ ಚುನಾವಣೆಯಲ್ಲೂ ಕಾಂಗ್ರೆಸ್ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಾಬಾಸಾಹೇಬ್ ಪಾಟೀಲ, ನಿಂಗಪ್ಪ ಅರಿಕೇರಿ, ಉಮೇಶ ಪಾಟೀಲ, ಜಗದೀಶ ಪಾಟೀಲ, ಬಸವರಾಜ ತಲ್ಲೂರ, ಸಿದ್ದನಗೌಡ ಪಾಟೀಲ, ಶಿವನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ