ಕನ್ಹೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಮಾತನಾಡಿ, ಮತಾಂತರ ಕಾಯ್ದೆ ವಿರೋಧಿಸುವ ರಾಜಕಾರಣಿಗಳ ಕ್ಷೇತ್ರಕ್ಕೆ ಹೋಗಿ ಅವರನ್ನು ಚುನಾವಣೆಯಲ್ಲಿ ಸೋಲಿಸುವವರೆಗೂ ಬಿಡುವುದಿಲ್ಲ, ಅಂತವರನ್ನು ದೇಶದಿಂದಲೇ ಒದ್ದೋಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಮ್ಮಲ್ಲಿರುವ ಬಡತನ, ಅಸಹಾಯಕತೆಗಳನ್ನು ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆಸೆ, ಆಮಿಷ, ಒತ್ತಡಗಳಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಅದನ್ನು ತಡೆಯುವ ಕಾನೂನು ಮಾಡಬೇಕಾಗಿದೆ. ಅದಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಬೆಳಗ್ಗೆ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮಠಾಧೀಶರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಮತಾಂತರ ತಡೆಯಲು ಹಿಂದೂ ಧರ್ಮ ನಶಿಸಿಹೊಗುವ ಸಂದರ್ಭದಲ್ಲಿ ಶಂಕರಾಚಾರ್ಯರು ಮಾಡಿದಂತಹ ಸಾಮೂಹಿಕ, ಸಾಮಾಜಿಕ ಚಳವಳಿಯ ಅವಶ್ಯಕತೆ ಕೂಡ ಇದೆ. ಸರಕಾರ ಸಮಾಜದೊಂದಿಗಿದೆ. ಸರಕಾರ ತನ್ನ ಕರ್ತವ್ಯವನ್ನು ಖಂಡಿತ ಮಾಡಲಿದೆ. ಮಠಾಧೀಶರು ಸಾಮಾಜಿಕ ಚಳವಳಿಯ ಚಿಂತನೆ ಮಾಡಬೇಕು. ಮಠಾಧೀಶರ ಮೇಲಿರುವ ನಂಬಿಕೆಯಿಂದ ಮಾತ್ರ ನಮ್ಮ ತನ ಉಳಿಸಿಕೊಳ್ಳಲು ಸಾಧ್ಯವಿದೆ ಎಂದೂ ಅವರು ತಿಳಿಸಿದರು.
ಸಾಮಾಜಿಕ ಪಿಡುಗು ತಡೆಗಟ್ಟಲು ಮಠಾಧೀಶರು ಎಲ್ಲ ಕ್ರಮ ಕೈಗೊಳ್ಳಬೇಕು. ನೀವು ಹೇಳಿದಂತಹ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಇದು ಸಮಾಜದ ಅವಶ್ಯಕತೆ. ಪಕ್ಷ ಸಂಬಂಧವಿಲ್ಲ. ಸಮಾಜದ ಅವಶ್ಯಕತೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ಪ್ರತಿಕ್ರಿಯಿಸಿ ಈಡೇರಿಸದಿದ್ದರೆ ಅದು ಜವಾಬ್ದಾರಿಯುತ ಸರಕಾರ ಎನಿಸದು. ಆ ಕೆಲಸವನ್ನು ನಾವು ಮಾಡುತ್ತೇವೆ. ಆ ನಿಟ್ಟಿನಲ್ಲಿ ಮುಂದುವರಿಯುತ್ತೇವೆ. ಪ್ರಮುಖ ಹಂತದಲ್ಲಿದೆ. ನಿಮ್ಮ, ಸಮಾಜದ ಭಾವನೆಗಳಿಗೆ ಸ್ಪಂದಿಸುತ್ತೇನೆ. ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಇದಕ್ಕೂ ಮೊದಲು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮನವಿ ಪತ್ರವನ್ನು ಓದಿದರು. ಮತಾಂತರ ಕಾಯ್ದೆ ಜಾರಿಗೊಳಿಸಲೇಬೇಕು. ಕುತಂತ್ರದ ಮತಾಂತರದಿಂದ ದೇಶಕ್ಕೆ ಮಾರಕವಾಗಲಿದೆ, ಆಂತರಿಕ ಕಲಹಕ್ಕೆ ಕಾರಣವಾಗಲಿದೆ. ಹಾಗಾಗಿ ಅಮಾಯಕ ಹಿಂದುಗಳನ್ನು ರಕ್ಷಿಸಬೇಕು. ಬೇರೆ ರಾಜ್ಯಗಳಲ್ಲಿರುವಂತೆ ಕಾಯ್ದೆ ಜಾರಿಗೆ ತರಬೇಕು ಎಂದು ವಿಶ್ವಹಿಂದೂ ಪರಿಷತ್ ಆಗ್ರಹಿಸುತ್ತಿದೆ ಎನ್ನುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಕನ್ಹೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಮಾತನಾಡಿ, ಮತಾಂತರ ಕಾಯ್ದೆ ವಿರೋಧಿಸುವ ರಾಜಕಾರಣಿಗಳ ಕ್ಷೇತ್ರಕ್ಕೆ ಹೋಗಿ ಅವರನ್ನು ಚುನಾವಣೆಯಲ್ಲಿ ಸೋಲಿಸುವವರೆಗೂ ಬಿಡುವುದಿಲ್ಲ, ಅಂತವರನ್ನು ದೇಶದಿಂದಲೇ ಒದ್ದೋಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಿಡಸೋಸಿ ಸ್ವಾಮಿಗಳು, ಮತಾಂತರಿಂದ ವಾಪಸ್ ಬರುವವರಿಗೆ ಪುನರ್ವಸತಿ ಮಾಡಿಕೊಡಲಾಗುವುದು. ಮಠಾಧೀಶರ ನೇತೃತ್ವದಲ್ಲಿ ಪ್ರತಿ ಗ್ರಾಮದಲ್ಲಿ ಸಮಿತಿ ಮಾಡುವ ಮೂಲಕ ಮತಂತರ ತಡೆಯಬೇಕು ಎಂದರು.
ಕಾರಂಜಿ ಮಠದ ಸ್ವಾಮಿಗಳು, ಗದಗ ಶಿವಾನಂದಮಠದ ಸ್ವಾಮಿಗಳು, ಬೈಲಹೊಂಗಲ ಮೂರುಸಾವಿರ ಮಠದ ಸ್ವಾಮಿಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಮಠಾಧೀಶರು ಭಾಗವಹಿಸಿದ್ದರು.
ವಿಶ್ವಹಿಂದೂ ಪರಿಷತ್ ಪ್ರಮುಖರು, ಸಚಿವರಾದ ಮುರುಗೇಶ ನಿರಾಣಿ, ಪ್ರಭು ಚವ್ಹಾಣ, ಆನಂದ ಮಾಮನಿ, ಅನಿಲ ಬೆನಕೆ, ಪ್ರಮೋದ ಕಟ್ಟಿ, ಗೋವರ್ಧನ ರಾವ್, ರಾಮನಗೌಡ ಪಾಟೀಲ, ಮನೋಹರ ಮಠದ, ಕೃಷ್ಣ ಭಟ್ ಮೊದಲಾದವರು ಇದ್ದರು.
ಈ ಬಾರಿ ಎಂಇಎಸ್ ವಿರುದ್ಧ ನಿರ್ಣಾಯಕ ಕ್ರಮ – ಬಸವರಾಜ ಬೊಮ್ಮಾಯಿ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ