ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮಗಿರುವ ಸಮಸ್ಯೆಗಳ ಬಗ್ಗೆ, ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಒಗ್ಗಟ್ಟಾಗಿ ಟ್ವಿಟರ್ ಮತ್ತು ಈಮೇಲ್ ಅಭಿಯಾನ ನಡೆಸಲು ಮುಂದಾಗಿದ್ದು, ಜನವರಿ 2ರಂದು ಭಾರತೀಯ ಕಾಲಮಾನ ಸಂಜೆ 4 ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿಗಳನ್ನು, ಬೇಡಿಕೆಗಳನ್ನು ಇಡಲಿದ್ದಾರೆ.
ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಹರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗುಹೋಗುಗಳ ಬಗ್ಗೆ ಅತಿ ಹೆಚ್ಚು ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು. ರಾಜ್ಯದಲ್ಲಿ ನೆರೆ ಬಂದರೂ, ಬರ ಬಂದರೂ, ಯಾವುದೇ ಸಂಕಷ್ಟ ಬಂದೊದಗಿದರೂ ತಕ್ಷಣ ಸಹಾಯಹಸ್ತ ಚಾಚುವವರೇ ಲಕ್ಷಾಂತರ ಅನಿವಾಸಿಗಳು.
ಆದರೆ ಆಶ್ಚರ್ಯವೆಂದರೆ ಈ ಅನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವವರೇ ಇಲ್ಲ, ಬಹುಕಾಲದಿಂದ ಅವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಇದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ, ಕೊರೊನ ಸಂಕಷ್ಟ ಸಂದರ್ಭದಲ್ಲಂತೂ ಇವರ ಗೋಳನ್ನು ಕೇಳುವವರೇ ಇರಲಿಲ್ಲ, ಇದೇ ಕಾರಣಕ್ಕೆ ಇದೀಗ ಅನಿವಾಸಿಗಳು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲೆಂದೇ ಒಂದು ದಿನವನ್ನು ಆಚರಿಸಲು ನಿರ್ಧರಿಸಿದ್ದು, ಅಭಿಯಾನದ ವಿಶಿಷ್ಟ ರೀತಿಯಲ್ಲಿ ಕರ್ನಾಟಕ ಸರ್ಕಾರದ ಕದತಟ್ಟಿ ಈ ಬಾರಿಯಾದರೂ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
12 ವರ್ಷಗಳ ಹಿಂದೆ ರಾಜ್ಯಸರ್ಕಾರ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಕ್ಷೇಮಾಭಿವೃಧ್ಧಿಗಾಗಿ ಸ್ಥಾಪಿತವಾದ ಸಮಿತಿಯೇ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿ. ಸಿಎಂರವರ ನೇರ ನಿಯಂತ್ರಣಕ್ಕೆ ಒಳಪಡುವ ಈ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಈ ಸಮಿತಿ ಬಂದರೂ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರು, ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಳಿರುವ ಕಾರಣ ಉಪಾಧ್ಯಕ್ಷರಿಗೆ ಈ ಸಮಿತಿಯಗೆ ಬೆನ್ನೆಲುಬು, ಆದರೆ ಕಳೆದ ಮೂರು ವರ್ಷಗಳಿಂದ ಈ ಸಮಿತಿಗೆ ಉಪಾಧ್ಯಕ್ಷರೇ ಇಲ್ಲದೇ ಅನಾಥವಾಗಿದೆ.
ಎನ್ ಆರ್ ಐ ಘಟಕದ ಉಪಾಧ್ಯಕ್ಷ ಕೂಡಲೇ ನೇಮಕವಾಗಬೇಕು, ಅದೂ ಅನಿವಾಸಿಗಳ ಬಗ್ಗೆ ಅರಿವಿರುವ ಒಬ್ಬ ಅನಿವಾಸಿ ಕನ್ನಡಿಗನೇ ಈ ಸ್ಥಾನಕ್ಕೆ ನೇಮಕವಾದರೆ ಅನಿವಾಸಿಗಳಿಗೆ ಅನುಕೂಲ, ಎಲ್ಲರೂ ನೇರವಾಗಿ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ, ಉಪಾಧ್ಯಕ್ಷರಿದ್ದರೆ ಸಮಸ್ಯೆ ತಿಳಿಸಲು ಸುಲಭ. ಇದಷ್ಟೇ ಅಲ್ಲದೆ ತಮ್ಮಲ್ಲಿರುವ ಹಲವಾರು ಸಮಸ್ಯೆಗಳ, ಬೇಡಿಕೆಗಳ ಪಟ್ಟಿಯೊಂದಿಗೆ ವಿಶ್ವದಾದ್ಯಂತ ಅನಿವಾಸಿ ಕನ್ನಡಿಗರು ಸರ್ಕಾರಕ್ಕೆ ಮನವಿ ಸಲ್ಲಿಸಲು ಜನವರಿ 2ರಂದು ‘ಎನ್ಆರ್ ಐ ಅಪೀಲ್ ಡೇ’ ಎಂದು ಟ್ವಿಟ್ಟರ್ ಅಭಿಯಾನ ಮತ್ತು ಇಮೇಲ್ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ, ನೂರಾರು ಕನ್ನಡ ಪರ ಸಂಘಟನೆಗಳು ಭಾಗವಹಿಸಲಿದೆ ಎಂದು ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ತಿಳಿಸಿದ್ದಾರೆ.
ಇನ್ನು ಇಟಲಿ ಕನ್ನಡ ಸಂಘದ ಅಧ್ಯಕ್ಷ ಹೇಮೇಗೌಡ, ನಾವು ಕರ್ನಾಟಕವನ್ನು, ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವವರು, ನಮಗೆ ಈ ಬಗ್ಗೆ ಹೆಮ್ಮೆಯಿದೆ, ಕೊರೋನ ಸಂಕಷ್ಟದ ಸಂದರ್ಭದಲ್ಲಿ ಅನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇರಲಿಲ್ಲ, ಏಕೆಂದರೆ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರೇ ಇರಲಿಲ್ಲ! ಇನ್ನಾದರೂ ನೇಮಿಸಿ, ಇನ್ನಾದರೂ ಅನಿವಾಸಿಗಳ ಮನವಿಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಅನಿವಾಸಿಗಳು ಶಾಶ್ವತ ಪೌರತ್ವ ಪಡೆಯಲು ಬಂದವರಲ್ಲ, ಅವರು ದುಡಿದ ಪ್ರತಿಯೊಂದು ರೂಪಾಯಿ ತಾಯ್ನಾಡಿಗೆ ಕಳುಹಿಸಿ ರಾಜ್ಯದ ಆರ್ಥಿಕತೆಗೆ ಸಹಾಯ ಮಾಡುವವರು, ಮುಖ್ಯಮಂತ್ರಿ ಯಡಿಯುರಪ್ಪನವರೇ, ಬಹಳಷ್ಟು ನಿರೀಕ್ಷೆಯೊಂದಿಗೆ ಅನಿವಾಸಿಗಳು ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದೇವೆ, ನಮ್ಮ ಬೇಡಿಕೆ ಕಡೆಗಣಿಸದಿರಿ ಎಂದು ಕತಾರ್ ತುಳು ಕೂಟದ ಮಾಜಿ ಅಧ್ಯಕ್ಷ ರವಿ ಶಟ್ಟಿ ಹೇಳಿದ್ದಾರೆ.
“ಎನ್ ಆರ್ ಐ ಅಪೀಲ್ ಡೆ’ ಅಭಿಯಾನದಲ್ಲಿ ಪಾಲ್ಗೊಳ್ಳುವುದು ವಿಶ್ವದಾದ್ಯಂತ ಪಸರಿಸಿರುವ ಪ್ರತಿಯೊಂದು ಅನಿವಾಸಿ ಕನ್ನಡಪರ ಸಂಘಟನೆಗಳು ಕರ್ತವ್ಯ, ನಿಮ್ಮ ನಿಮ್ಮ ದೇಶದಲ್ಲಿರುವ ಅನಿವಾಸಿ ಕನ್ನಡಿಗರ ಬೇಡಿಕೆಗಳನ್ನು ಜನವರಿ 2ರ ಅಭಿಯಾನದ ಮೂಲಕ ಒಕ್ಕೊರಲಿನಿಂದ ಸರ್ಕಾರದ ಮುಂದಿಟ್ಟು ಸ್ಪಂದಿಸುವರೆಗೂ ಒತ್ತಾಯಿಸೋಣ ಎಂದು ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಅನಿವಾಸಿ ಕನ್ನಡಿಗರ ಅಳಲನ್ನು ಕಡೆಗಾಣಿಸಲಾರರು ಎಂಬ ಭರವಸೆ ಇದೆ. ಸತತವಾಗಿ ಅನಿವಾಸಿಗಳನ್ನು ಮೂಲೆಗುಂಪಾಗಿಸುವ ಕಾರ್ಯ ನಿಲ್ಲಬೇಕು. ಅನಿವಾಸಿ ಕನ್ನಡಿಗರ ಒಗ್ಗಟ್ಟಿನ ಅಭಿಯಾನ ‘ಎನ್ಆರೈ ಅಪೀಲ್ ಡೇ’ ಯಶಸ್ವಿಯಾಗಲಿ, ಎಲ್ಲಾ ಬೇಡಿಕೆ ತ್ವರಿತವಾಗಿ ಈಡೇರಲಿ ಎಂದು ಹಾರೈಸುವೆ ಎಂದು ಯುಎಇ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಅನಿವಾಸಿ ಭಾರತೀಯ ಸಮಿತಿಗೆ ಸಮರ್ಥ ನೇತೃತ್ವ ಇದ್ದಲ್ಲಿ ಪ್ರಪಂಚದಾದ್ಯಂತ ಕನ್ನಡಿಗರು ಕನ್ನಡದ ಕಂಪನ್ನು ಪಸರಿಸಲು ಸಾಧ್ಯ, ಅನಿವಾಸಿ ಕನ್ನಡಿಗರು ಸಂಘಟನಾತ್ಮಕವಾಗಿ ಬೆಳೆಯಲೂ ಸಾಧ್ಯ, ಹೀಗಾಗಿ ಅನಿವಾಸಿ ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ‘ಎನ್ಆರೈ ಅಪೀಲ್ ಡೇ’ ಅಭಿಯಾನದಲ್ಲಿ ಕೈಜೋಡಿಸಿ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರಯತ್ನ ಮುಂದುವರೆಸೋಣ ಎಂದು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಇ ಮೂಳೂರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ಪ್ರಕರಣ; ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ದೃಢ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ