ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನೂತನ ಪಿಂಚಣಿ ಯೋಜನೆಯಲ್ಲಿ ಮಾರ್ಪಾಡು/ಬದಲಾವಣೆ ಮಾಡುವ ಬಗ್ಗೆ ಪರಿಶೀಲಿಸಲು ಸರಕಾರದ ಆದೇಶ ಸಂಖ್ಯೆ: ಆಇ 107 ಪಿಇಎನ್ 2018, ದಿನಾಂಕ: 11-12-2018 ರಂದು ತಮ್ಮ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿಯನ್ನು ರಚಿಸಿ ಮೂರು ವರ್ಷಗಳಾಗಿದ್ದರೂ ಸಮಿತಿಯು ಯಾವದೇ ವರದಿಯನ್ನು ಸರಕಾರಕ್ಕೆ ಸಲ್ಲಿಸದಿರುವುದು ಅತ್ಯಂತ ಖೇದಕರ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ನೂತನ ಪಿಂಚಣಿ ಯೋಜನೆ ಮಾರ್ಪಾಡು ಸಮಿತಿಯ ಪದನಿಮಿತ್ತ ಅಧ್ಯಕ್ಷರಿಗೆ ಅವರು ಪತ್ರ ಬರೆದಿದ್ದಾರೆ.
ಸರಕಾರದ ಆದೇಶ ಸಂಖ್ಯೆ: ಆಇ (ಸ್ಪೇಶಲ್) 04 ಪಿಇಟಿ 2005, ದಿನಾಂಕ: 31-03-2006 ರನ್ವಯ ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಸರಕಾರಿ ಆದೇಶ ಸಂಖ್ಯೆ: ಆಇ (ಸ್ಪೇಶಲ್) 28 ಪಿಇಎನ್ 2009, ದಿನಾಂಕ: 19-01-2010 ರನ್ವಯ ನೌಕರರ ಪಾಲಿನ ವಂತಿಗೆ ಶೇಕಡಾ 10ನ್ನು ಸಂಬಳದಲ್ಲಿ ಕಟಾಯಿಸಿ ಸರಕಾರದ ವತಿಯಿಂದ ತುಂಬಬೇಕಾದ ವಂತಿಗೆ ಶೇಕಡಾ 10ನ್ನು ತುಂಬಲು ಪ್ರಾರಂಭಿಸಲಾಯಿತು. ನಂತರ ಸರಕಾರದ ಪಾಲಿನ ವಂತಿಗೆಯನ್ನು ಶೇಕಡಾ 14ಕ್ಕೆ ಏರಿಸಿ ಆದೇಶ ಹೊರಡಿಸಲಾಗಿದೆ.
ಆದರೆ ದಿನಾಂಕ: 01-04-2006 ಕ್ಕಿಂತ ಮೊದಲಿನ ಸರಕಾರಿ ಸಿಬ್ಬಂದಿ ಹಾಗೂ ಅನುದಾನಿತ ಸಿಬ್ಬಂದಿಗೆ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒಂದೇ ರೀತಿಯಾಗಿ ಪಾವತಿಸಲಾಗುತ್ತಿತ್ತು. ಆದರೆ ನೂತನ ಪಿಂಚಣಿ ಯೋಜನೆ ಜಾರಿ ಕುರಿತು ಹೊರಡಿಸಲಾದ ಆದೇಶದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವಂತಿಗೆಯನ್ನು ಆಡಳಿತ ಮಂಡಳಿಗಳೇ ತುಂಬಬೇಕೆಂದು ಆದೇಶಿಸಿದ್ದರಿಂದ ದಿನಾಂಕ: 01-04-2006 ರ ನಂತರ ನೇಮಕಗೊಂಡ ಹಾಗೂ ಅನುಮೋದನೆಗೊಂಡ ಅನುದಾನಿತ ಸಿಬ್ಬಂದಿಗೆ ನೂತನ ಪಿಂಚಣಿ ಯೋಜನೆಯು ಅನುಷ್ಠಾನಗೊಂಡಿರುವದಿಲ್ಲ. ಸರಕಾರವು ದಿನಾಂಕ: 01-04-2006 ಕ್ಕಿಂತ ಮೊದಲಿನ ಸಿಬ್ಬಂದಿಗೆ ನೌಕರ ಮಾಲೀಕರ ಸಂಬಂಧ ಆಡಳಿತ ಮಂಡಳಿ ಹಾಗೂ ನೌಕರರ ಮಧ್ಯ ಇದ್ದಾಗಲೂ ಕೂಡಾ ಸರಕಾರಿ ಹಾಗೂ ಅನುದಾನಿತ ಸಿಬ್ಬಂದಿಗಳಿಗೆ ತಾರತಮ್ಯ ಮಾಡದೇ ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿತ್ತು.
ಈಗ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಾಗ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ನೌಕರ ಹಾಗೂ ಮಾಲೀಕರ ಸಂಬಂಧ ಆಡಳಿತ ಮಂಡಳಿ ಹಾಗೂ ನೌಕರರ ನಡುವೆ ಇದೆ ಎಂದು ವ್ಯಾಖ್ಯಾನಿಸಿ ಆದೇಶ ಹೊರಡಿಸಿರುವದು ಸಂವಿಧಾನ ವಿರೋಧಿ ಆದೇಶವೆಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಈ ಆದೇಶವನ್ನು ಅಧಿಕಾರಿಗಳ ಸಮಿತಿಯು ಪುನರ್ ವಿಮರ್ಶಿಸಿ ಅನುದಾನಿತ ಸಿಬ್ಬಂದಿಯವರ ವಂತಿಗೆಯನ್ನು ಸರಕಾರವೇ ತುಂಬುವಂತೆ ಶಿಫಾರಸ್ಸು ಮಾಡುವ ಬಗ್ಗೆ ಕೂಡಲೇ ಪರಿಶೀಲಿಸುವದು ತುರ್ತು ಅಗತ್ಯವಾಗಿದೆ. ಈ ಆದೇಶವು ಕಾನೂನಿನ ವಿಮರ್ಶೆಗೊಳಪಟ್ಟಲ್ಲಿ ಸರಕಾರ ಮುಜುಗುರಕ್ಕೆ ಒಳಪಡಬೇಕಾಗುತ್ತದೆ ಎಂಬ ಅಂಶವನ್ನು ಕೂಡಾ ಸಮಿತಿಯ ಗಮನಕ್ಕೆ ತರುತ್ತಾ ಕೂಡಲೇ ಈ ಕ್ಲಿಷ್ಟಕರ ಸಮಸ್ಯೆಯ ಪರಿಹಾರ ಮಾಡಲು ಸರಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಬೇಕು ಎಂದು ಸೂಚಿಸಿದ್ದಾರೆ.
ವರ್ಗಾವಣೆ ಸುದ್ದಿ ಕೇಳಿ ಶಾಕ್; ಶಿಕ್ಷಕ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ