Kannada NewsKarnataka NewsLatest
ಬೆಳಗಾವಿ ಜಿಲ್ಲೆಯ 9 ದೇವಸ್ಥಾನಗಳ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ; ಬನದ ಹುಣ್ಣಿಮೆ ಜಾತ್ರೆಯೂ ಬ್ಯಾನ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಬೆಳಗಾವಿ ಜಿಲ್ಲೆಯ 9 ದೆವಸ್ಥಾನಗಳ ದರ್ಶನ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇದರಿಂದಾಗಿ ಅಂತಾರಾಜ್ಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ಬನದ ಹುಣ್ಣಿಮೆ ಜಾತ್ರೆಯೂ ರದ್ದಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ 6 -8 ಲಕ್ಷ ಭಕ್ತರು ಆಗಮಿಸುವ ಸವದತ್ತಿ ಯಲ್ಲಮ್ಮ ಜಾತ್ರೆ ಜನೆವರಿ 14ರಿಂದ 28ರ ವರೆಗೆ ನಡೆಯಬೇಕಿತ್ತು. ಆದರೆ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಈಗಾಗಲೆ ರಾಜ್ಯ ಸರಕಾರ ಹೊರಡಿಸಿರುವ ಆದೇಶದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈರಾಣುವಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಅತ್ಯಂತ ಅವಶ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪರಿಶೀಲಿಸಲಾಗಿ, ಬೆಳಗಾವಿ ಜಿಲ್ಲೆಯಲ್ಲಿರುವ ಹಲವಾರು ಪ್ರಮುಖ ಧಾರ್ಮಿಕ ಕೇಂದ್ರ, ದೇವಸ್ಥಾನಗಳಿಗೆ ಮಹಾರಾಷ್ಟ್ರ ರಾಜ್ಯದಿಂದ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಭಕ್ತಾದಿಗಳು ಆಗಮಿಸುವ ಸಂಭವ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 (ಕರೋನಾ) ಹಾಗೂ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಮುಂಜಾಗೃತಾ ಕ್ರಮವಾಗಿ ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಜರುಗಬಹುದಾದ ಸರ್ವ ಧರ್ಮೀಯ ಎಲ್ಲಾ ಮತ್ತು ವಿಶೇಷ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು ಹಾಗೂ ಆದೇಶದಲ್ಲಿ ವಿವರಿಸಿದ ದೇವಸ್ಥಾನಗಳಲ್ಲಿ ಸಾರ್ವಜನಿಕ ಭಕ್ತಾಧಿಗಳ ದರ್ಶನವನ್ನು ಮುಂದಿನ ಆದೇಶದವರೆಗೆ ನಿರ್ಭಂಧಿಸುವುದು ಸೂಕ್ತವೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ರೇಣುಕಾ ಯಲ್ಲಮ್ಮ ದೇವಸ್ಥಾನ, ಯಲ್ಲಮ್ಮನ ಗುಡ್ಡ, ಶ್ರೀ ಜೋಗಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ ಸವದತ್ತಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೊಡಚಿ, ರಾಮದುರ್ಗ, ಮಾಯಕ್ಕ ದೇವಿ ದೇವಸ್ಥಾನ ಚಿಂಚಲಿ, ರಾಯಬಾಗ, ಶ್ರೀ ದತ್ತ ದೇವಸ್ಥಾನ ಪಂತಬಾಳೇಕುಂದ್ರಿ, ಹೊಳೆಮ್ಮ ದೇವಿ ದೊವಸ್ಥಾನ, ಬಡಕುಂದ್ರಿ, ಹುಕ್ಕೇರಿ, ಮಲ್ಲಯ್ಯ ದೇವಸ್ಥಾನ, ಮಂಗಸೂಳಿ, ಅಥಣಿ, ಬಸವೇಶ್ವರ ದೇವಸ್ಥಾನ ಖಿಳೇಗಾಂವ್, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಕೊಕಟನೂರ, ಅಥಣಿ -ಈ ದೇವಸ್ಥಾನಗಳಲ್ಲಿ ದರ್ಸನ ನಿಷೇಧಿಸಲಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಜರುಗಲಿರುವ ಸರ್ವ ಧರ್ಮೀಯ ಎಲ್ಲಾ ಉತ್ಸವ, ವಿಶೇಷ ಉತ್ಸವ ಹಾಗೂ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಆಡಳಿತ ಮಂಡಳ, ಆರ್ಚಕರು ಸರಳ ಹಾಗೂ ಸಾಂಕೇತಿಕವಾಗಿ ಕೇವಲ ದೇವಾಲಯದ ಪ್ರಾಂಗಣದೊಳಗೆ ಆಚರಿಸಬೇಕೆೆಂದು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ಪೂರ್ಣ ಆದೇಶಕ್ಕೆ ಇಲ್ಲಿ ಕ್ಲಿಕ್ ಮಾಡಿ – Temple ban Order
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ