ನನ್ನ ಗಮನಕ್ಕೆ ಬಂದಿಲ್ಲ ಎಂದು ಕುಲಪತಿ
ಪ್ರಗತಿವಾಹಿನಿ ಸುದ್ದಿ, ಧಾರವಾಡ – ಎಲ್ಲೆಡೆ ಕೊರೋನಾ ಅಟ್ಟ ಹಾಸ ಮೆರೆಯುತ್ತಿದ್ದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೊರೋನಾವನ್ನು ಸ್ವಾಗತಿಸುವ ರೀತಿಯಲ್ಲಿ ಭರ್ಜರಿ ಡಾನ್ಸ್ ಮಾಡಿದ್ದಾರೆ.
ಪ್ರಥಮ ವರ್ಗದ ಮೈಕ್ರೋಬಯಾಲಜಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿ – ವಿದ್ಯಾರ್ಥಿನಿಯರೆಲ್ಲ ಸೇರಿ ಭರ್ಜರಿ ನೃತ್ಯ ಮಾಡಿದ್ದಾರೆ.
ತನ್ಮೂಲಕ ವಿಶ್ವವಿದ್ಯಾಲಯ ಜನೆವರಿ 6ರಂದು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯನ್ನು ತಾನೇ ಉಲ್ಲಂಘಿಸಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಭಾಭವನದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಅನೇಕ ಉಪನ್ಯಾಸಕರ ಉಪಸ್ಥಿತಿಯಲ್ಲೇ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ ಸಮಾರಂಭದ ನಂತರ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಕೆಲವು ಉಪನ್ಯಾಸಕರೂ ಭಾಗವಹಿಸಿದ್ದಾರೆ.
ವಿವಿಯಿಂದ ಜನೆವರಿ 6ರಂದು ಹೊರಡಿಸಿರುವ ಮಾರ್ಗಸೂಚಿವಿದ್ಯಾರ್ಥಿಗಳೆಲ್ಲ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಸೇರಿದಂತೆ 12ಕ್ಕೂ ಹೆಚ್ಚು ಸೂಚನೆಗಳನ್ನೊಳಗೊಂಡ ಮಾರ್ಗಸೂಚಿಯನ್ನು ವಿಶ್ವವಿದ್ಯಾಲಯ ಜನೆವರಿ 6ರಂದು ಹೊರಡಿಸಿದೆ.
ಆದರೆ ಜನೆವರಿ 11ರಂದು ನಡೆದ ಈ ಕಾರ್ಯಕ್ರಮದಲ್ಲಿ ಮಾತ್ರ ಇವ್ಯಾವುವೂ ಪಾಲನೆಯಾಗಿಲ್ಲ. ಈ ಬಗ್ಗೆ ವಿವಿಯ ಕುಲಪತಿ ಕೆ.ಬಿ.ಗುಡಸಿ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ನಾನು ಉದ್ಘಾಟನೆ ಮಾಡಿ ಬಂದಿದ್ದೇನೆ. ಆದರೆ ಡಾನ್ಸ್ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಈ ಬಗ್ಗೆ ವಿಚಾರಿಸಿ, ಎಚ್ಚರಿಕೆ ಕೊಡುತ್ತೇನೆ ಎಂದು ತಿಳಿಸಿದರು.
ಕೋವಿಡ್ ಸೆಲ್ ಉಸ್ತುವಾರಿ ಡಾ.ವೇದಮೂರ್ತಿ ಅವರನ್ನು ಪ್ರಗತಿವಾಹಿನಿ ಸಂಪರ್ಕಿಸಿದಾಗ, ಎಲ್ಲವನ್ನೂ ಅನುಮತಿ ಪಡೆದೇ ಮಾಡಿದ್ದೇವೆ. ಕೇವಲ 50 ವಿದ್ಯಾರ್ಥಿಗಳು ಮಾತ್ರ ಡಾನ್ಸ್ ಮಾಡಿದ್ದಾರೆ. ಇದೇನೂ ದೊಡ್ಡ ವಿಷಯವಲ್ಲ ಎಂದರು.
ನಾನು ಉದ್ಘಾಟನೆ ಮಾಡಿ ಬಂದಿದ್ದೇನೆ. ಆದರೆ ನಂತರ ಡಾನ್ಸ್ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಸಂಬಂಧಿಸಿದವರಿಗೆ ವಾರ್ನ್ ಮಾಡುತ್ತೇನೆ.
-ಕೆ.ಬಿ.ಗುಡಸಿ, ವಿವಿ ಕುಲಪತಿ
ಮಂಗಳವಾರ ಮೈಕ್ರೋಬಯಾಲಜಿ ವಿಭಾಗದ ಪ್ರಥಮ ವರ್ಗದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ವವಿದ್ಯಾಲಯದ ಅನುಮತಿ ಪಡೆದೇ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಕುಲಪತಿಗಳೂ ಭಾಗವಹಿಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಕಾರ್ಯಕ್ರಮ ಮಾಡಿದ್ದೇವೆ. ಕಾರ್ಯಕ್ರಮದ ನಂತರ ಸುಮಾರು 50 ವಿದ್ಯಾರ್ಥಿಗಳು ನೃತ್ಯ ಮಾಡಿದ್ದಾರೆ. ಇದೇನೂ ದೊಡ್ಡ ವಿಷಯವಲ್ಲ.
– ಡಾ.ವೇದಮೂರ್ತಿ, ಕೋವಿಡ್ ಸೆಲ್ ಉಸ್ತುವಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ