Latest

ಈ ಸಾವು ನ್ಯಾಯವೇ…?: ಸ್ವಾರಿ ಚಿನ್ನಿ, ನನ್ನನ್ನು ಕ್ಷಮಿಸು ಎಂದು ಬಿಕ್ಕಿ ಬಿಕ್ಕಿ ಅತ್ತ ಅಪ್ಪ; ಎರಡನೇ ಮಗುವನ್ನೂ ಉಳಿಸಿಕೊಳ್ಳಲಾಗಲಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿ ಬಾಲಕಿ ಸಮನ್ವಿ ಅಂತ್ಯಕ್ರಿಯೆ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ.  ತಂದೆ ರೂಪೇಶ್ ಪುಟ್ಟ ಮಗುವಿನ ಪಾರ್ಥಿವಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ್ದು, ಸಮನ್ವಿ ಪಂಚ ಭೂತಗಳಲ್ಲಿ ಲೀನವಾಗಿದ್ದಾಳೆ. ತಂದೆ-ತಾಯಿ, ರಿಲಾಲಿಟಿ ಶೋ ಸಹಕಲಾವಿದರ ಆಕ್ರಂದನ ಮುಗಿಲುಮುಟ್ಟಿದೆ.

ನಿನ್ನೆ ಸಂಜೆ ಬೆಂಗಳೂರಿನ ಕೋಣನಕುಂಟೆ ವಾಜರಹಳ್ಳಿ ಬಳಿ ಸ್ಕೂಟರ್ ನಲ್ಲಿ ತಂದೆ ರೂಪೇಶ್ ಹಾಗೂ ತಾಯಿ ಅಮೃತಾ ನಾಯ್ಡು ಜತೆ ಸಮನ್ವಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಚಾಲಕ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿಹೊಡೆದಿದ್ದಾನೆ. ಸ್ಥಳದಲ್ಲೇ ಬಾಲಕಿ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ನಾಯ್ಡು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಅಮೃತಾ ನಾಯ್ಡು ಖ್ಯಾತ ಹರಿಕಥೆ ದಾಸ ಗುರುರಾಜಲು ನಾಯ್ಡು ಮೊಮ್ಮಗಳಾಗಿದ್ದು, ಕಿರುತೆರೆ, ರಿಯಾಲಿಟಿ ಶೋ ನಿರೂಪಣೆ ಹಾಗೂ ಹರಿಕಥೆ ಹೇಳುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. 6 ವರ್ಷದ ಬಾಲಕಿಯಾಗಿದ್ದ ಸಮನ್ವಿ ಕೂಡ ಹರಿಕಥೆ ಮೂಲಕ ಮನೆಮಾತಾಗಿದ್ದಳಲ್ಲದೇ ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿನ ಆಕೆಯ ಅಭಿನಯ ಕಂಡು ಪುಟಾಣಿ ಪ್ರತಿಭೆಗೆ ಇಡೀ ಕನ್ನಡ ನಾಡು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಅಮೃತಾ ಬಾಳಲ್ಲಿ ಆಘಾತದ ಮೇಲೆ ಆಘಾತ:

ಸಮನ್ವಿ ತಾಯಿ ಅಮೃತಾ ಇದೀಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಸಂತಸದ ದಿನಗಳನ್ನು ಎದುರು ನೋಡುತ್ತಿದ್ದ ಸಂದರ್ಭದಲ್ಲಿಯೇ 6 ವರ್ಷದ ಮಗಳನ್ನು ಕಳೆದುಕೊಂಡ ದುರಂತ ಸಂಭವಿಸಿದೆ. ಅದಾಗಲೇ ಒಂದು ಮಗುವನ್ನು ಕಳೆದುಕೊಂಡಿದ್ದ ಅಮೃತಾ ಇದೀಗ ಎರಡನೇ ಮಗುವನ್ನು ಕಳೆದುಕೊಂಡಿದ್ದು ಆಕ್ರಂದನ ಮುಗಿಲುಮುಟ್ಟಿದೆ.

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸಂದರ್ಭದಲ್ಲೇ ತಮ್ಮ ಜೀವನದಲ್ಲಿನ ನೋವನ್ನು ತೋಡಿಕೊಂಡಿದ್ದ ಅಮೃತಾ, ತಮಗೆ ಮೊದಲ ಮಗು 7 ತಿಂಗಳ ಗಭಿಣಿಯಾಗಿದ್ದಾಗಲೇ ಹೆರಿಗೆಯಾಗಿತ್ತು. 25 ದಿನಗಳ ಕಾಲ ಮಾತ್ರ ಮಗು ಬದುಕಿತ್ತು. 25 ದಿನವೂ ಮಗು ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಸಂದರ್ಭ ಕ್ಷಣ ಕ್ಷಣಕ್ಕೂ ಅನುಭವಿಸಿದ್ದ ನೋವು ಕರುಳು ಹಿಂಡುತಿತ್ತು.  ಅದಾದ ಬಳಿಕ ನಮ್ಮ ಬಾಳಿಗೆ ಬಂದಿದ್ದು ಸಮನ್ವಿ. ಸಮನ್ವಿಯ ಸಂತೋಷ- ಆಕೆಯೇ ನಮಗೆ ಪ್ರಪಂಚ. ಆಕೆಯ ಪ್ರತಿಭೆಗೂ ಒಂದು ವೇದಿಕೆ ಕಲ್ಪಿಸಬೇಕು ಎಂಬ ಕಾರಣಕ್ಕೆ ರಿಯಾಲಿಟಿ ಶೋಗೆ ಬಂದಿದ್ದಾಗಿ ತಿಳಿಸಿದ್ದರು.

ಆದರೆ ಈಗ ತಂದೆ-ತಾಯಿಯ ಮುದ್ದು ಮಗಳಾಗಿದ್ದ ಸಮನ್ವಿ ಅಪಘಾತದಲ್ಲಿ ಕೊನೆಯುಸ್ಸಿರೆಳೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಗಿರುವ ತಾಯಿ ಅಮೃತಾಳಿಗೆ ಬರಸಿಡಿಲು ಬಡಿದಂತಾಗೆ. ತಂದೆ ರೂಪೇಶ್  ಮಗಳೆ ನನ್ನನ್ನು ಕ್ಷಮಿಸಿಬಿಡು ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಭೀಕರ ರಸ್ತೆ ಅಪಘಾತ; ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿ 6 ವರ್ಷದ ಬಾಲಕಿ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button