Kannada NewsLatest

ಜ್ಞಾನವನ್ನು ಗುರಿಯಾಗಿಟ್ಟುಕೊಂಡಾಗ ವ್ಯಕ್ತಿತ್ವ ಬೆಳವಣಿಗೆ ಮತ್ತು ರಾಷ್ಟ್ರದ ನಿರ್ಮಾಣ ಸಾಧ್ಯ: ಸ್ವಾಮಿ ಮೋಕ್ಷಾತ್ಮಾನಂದ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ರಾಮಕೃಷ್ಣ ಮಿಶನ್ ಆಶ್ರಮದಲ್ಲಿ ಜನವರಿ 12ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ರಾಮಕೃಷ್ಣ ಮಿಶನ್ ಆಶ್ರಮ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನೋತ್ಸವದ ಅಂಗವಾಗಿ “ರಾಷ್ಟ್ರಿಯ ಯುವ ದಿನಾಚರಣೆ”ಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಬಸವರಾಜ ಮಿಲ್ಲಾನಟ್ಟಿಯವರು ನಡೆಸಿಕೊಟ್ಟರು.

ರಾಮಕೃಷ್ಣ ಮಿಶನ್ ಆಶ್ರಮದ ಕಾರ್ಯದರ್ಶಿಗಳಾದ ಪೂಜ್ಯ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಮಿ ವಿವೇಕಾನಂದರು ಇಂದಿನ ಯುವ ಜನತೆಯ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸವನ್ನು ಮಾಡುವುದರ ಮೂಲಕ ರಾಷ್ಟ್ರದ ವಿಕಾಸಕ್ಕೆ ಕೊಡುಗೆಯನ್ನು ನೀಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಮೋಕ್ಷಾತ್ಮಾನಂದಜೀಯವರು ‘ಇಡೀ ಜಗತ್ತಿಗೆ ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನ ಮತ್ತು ಚಾರಿತ್ರ್ಯದಿಂದಾಗಿ ಪೂಜಿಸಲ್ಪಡುತ್ತಿದ್ದಾರೆ. ಸ್ವಾಮೀಜಿಯವರ ವಿಶೇಷ ಗುಣಗಳಾದ ಶಕ್ತಿ, ಆತ್ಮವಿಶ್ವಾಸ ಮತ್ತು ನಿರ್ಭಯತೆಗಳು ಅವರ ಆತ್ಮಚಿಂತನೆ ಮತ್ತು ಆತ್ಮಜ್ಞಾನದ ಮೂಲಕ ಸಹಜವಾಗಿ ಪ್ರಾಪ್ತವಾದವು. ಆದ್ದರಿಂದ ಯುವಕರು ಜ್ಞಾನವನ್ನು ಗುರಿಯಾಗಿಟ್ಟುಕೊಂಡು ಚಾರಿತ್ರ್ಯವನ್ನು ರೂಪಿಸಿಕೊಳ್ಳಬೇಕು. ಚಾರಿತ್ರ್ಯವೆಂದರೆ ಸತ್ಯ, ಬ್ರಹ್ಮಚರ್ಯ ಮತ್ತು ನಿಸ್ವಾರ್ಥತೆ. ಪ್ರಸ್ತುತ ಸಮಾಜದಲ್ಲಿ ಪವಿತ್ರತೆಯ ಕೊರತೆ ಬಹಳವಾಗಿ ಕಾಣಿಸುತ್ತಿದೆ. ಧ್ಯಾನ ಮತ್ತು ಆತ್ಮ ಚಿಂತನೆಯ ಸಹಾಯದಿಂದ ಪವಿತ್ರ ಜೀವನವನ್ನು ನಡೆಸುವುದರ ಮೂಲಕ ಜ್ಞಾನವನ್ನು ನಮ್ಮ ಗುರಿಯಾಗಿಟ್ಟುಕೊಂಡಾಗ ವ್ಯಕ್ತಿತ್ವ ಬೆಳವಣಿಗೆ ಮತ್ತು ರಾಷ್ಟ್ರದ ನಿರ್ಮಾಣವಾಗುತ್ತದೆ’ ಎಂದು ಸ್ವಾಮೀಜಿಯವರು ತಿಳಿಸಿದರು.

ನಂತರ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಶ್ರೀ ಭೀಮಪ್ಪ ಲಾಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ನಾಗರಾಜ್, ನೆಹರು ಯುವ ಕೇಂದ್ರದ ನಿವೃತ್ತ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ಶ್ರೀ ಎ. ಯು. ಜಮಾದಾರ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ವಿಜೇತರಾದ ಶ್ರೀ ಮಲ್ಲೇಶ ಚೌಗಲಾ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ನಲತವಾಡ, ಅರ್ಜುನ ಪ್ರಶಸ್ತಿ ವಿಜೇತರಾದ ಮುಕುಂದ ಕಿಲ್ಲೇಕರ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರುದುಂಡಿ ಮತ್ತು ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದಯ ಪಾಟೀಲ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button