ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳ ಸಾವಿಗೆ ಅರೋಗ್ಯ ಸಿಬ್ಬಂದಿಗಳ ಎಡವಟ್ಟು, ಲಸಿಕಾ ಮಾರ್ಗಸೂಚಿ ಉಲ್ಲಂಘನೆಯೇ ಕಾರಣ ಎಂದು ಬೆಳಗಾವಿ ಲಸಿಕಾಧಿಕಾರಿ ಈಶ್ವರಪ್ಪ ಗಡಾದ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 10ರಂದು ಲಸಿಕೆ ತೆಗೆದುಕೊಂಡು ಹೋದ ಸಾಲಹಾಳ್ಳಿ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಅಂದೇ ವಾಪಸ್ ಲಸಿಕೆಯನ್ನು ತಂದು ಇಡಬೇಕಿತ್ತು. ಆದರೆ ಹೋಟೆಲ್ ಫ್ರಿಜರ್ ನಲ್ಲಿ ಲಸಿಕೆ ಇಟ್ಟು ಜನವರಿ 11ರಂದು ಮತ್ತು 12ರಂದು ಲಸಿಕೆ ಹಾಕಿದ್ದಾರೆ. ಸಿಬ್ಬಂದಿಗಳ ಎಡವಟ್ಟಿನಿಂದಲೆ ದುರಂತ ಸಂಭವಿಸಿದೆ ಎಂದಿದ್ದಾರೆ.
ಲಸಿಕೆ ಹೋಟೆಲ್ ಫ್ರಿಜರ್ ನಲ್ಲಿ ಇಟ್ಟಿದ್ದರಿಂದ ಕೋಲ್ಡ್ ಚೈನ್ ಮೆಂಟೇನ್ ಆಗಿಲ್ಲ. ಜ.11ರಂದು ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಲಸಿಕೆ ಹಾಕಿದ್ದಾರೆ. ಆಗ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ ಜನವರಿ 12ರಂದು ಮೃತಪಟ್ತಿದ್ದಾನೆ. ಜ.12ರಂದು ಬೋಚಬಾಳ ಗ್ರಾಮದಲ್ಲಿ ನಾಲ್ವರು ಮಕ್ಕಳಿಗೆ ಲಸಿಕೆ ನೀಡಿದ್ದಾರೆ. ನಾಲ್ವರಿಗೂ ಜ್ವರ, ವಾಂತಿ, ಬೇಧಿ ಕಾಣಿಸಿಕೊಂಡಿದೆ. ಪವಿತ್ರಾ ಎಂಬ ಮಗು ಜ.13ರಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದೆ. ಬಳಿಕ ಭಾನುವಾರ ಮಧು ಕುರಗುಂದಿ ಎಂಬ ಮಗು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ವಿವರಿಸಿದರು.
ಲಸಿಕೆ ಪಡೆದಿರುವ ಇನ್ನು ಇಬ್ಬರು ಮಕ್ಕಳು ಅನಾರೋಗ್ಯಕ್ಕೀಡಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಸಾಲಹಳ್ಳಿ ಪಿಹೆಚ್ ಸಿಯು, ಎ ಎನ್ ಎಂ ಫಾರ್ಮ್ ಸಿಸ್ಟ್ ನಿರ್ಲಕ್ಷ್ಯ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿಯಲ್ಲಿ ಮೂವರು ಮಕ್ಕಳು ಸಾವು ಪ್ರಕರಣ; ಇಬ್ಬರು ಅಧಿಕಾರಿಗಳು ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ