ಅನಿಲ ಬೆನಕೆ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಸಿಎಸ್ ಗೆ ಕಾಂಗ್ರೆಸ್ ದೂರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೋವಿಡ್‌ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ, ವಿವಿಧ ಸಮಾರಂಭಗಳಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನಿಯೋಗ ಮುಖ್ಯ ಕಾರ್ಯದರ್ಶಿ ರವಿ ಕುಮಾರ ಅವರನ್ನು ಆಗ್ರಹಿಸಿದೆ.

ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಂಡವರ ವಿರುದ್ಧ ಸರಕಾರ ಎಫ್ಐಆರ್ ದಾಖಲಿಸಿದೆ. ಆದರೆ ನಿಯಮ ಉಲ್ಲಂಘಿಸಿದ ಬಿಜೆಪಿ ಮುಖಂಡರ ವಿರುದ್ದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿಯೋಗ ದೂರಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೆಸರಿನ ಪತ್ರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಬಿ.ಎಲ್‌.ಶಂಕರ್‌, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ, ಮುಖಂಡರಾದ ವಿಜಯ್‌ ಮುಳಗುಂದ ಅವರ  ನಿಯೋಗವು  ಪಿ.ರವಿಕುಮಾರ್‌ ಅವರಿಗೆ ಸಲ್ಲಿಸಿತು.

ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಭಾಪತಿ, ಮುಖ್ಯಮಂತ್ರಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಅಲ್ಲಿ ಸಹ ಯಾವುದೇ ಮಾರ್ಗಸೂಚಿ ಅನುಸರಿಸಿರಲಿಲ್ಲ.

ಗೃಹ ಸಚಿವ ಅರಗಜ್ಞಾನೇಂದ್ರ ತಮ್ಮ ಕ್ಷೇತ್ರದಲ್ಲಿ ಜಾತ್ರೆ ಉದ್ಘಾಟಿಸಿದ್ದಾರೆ. ಬಿಜೆಪಿ ಶಾಸಕ ಸುಭಾಷ ಗುತ್ತೇದಾರ 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದಾರೆ. ರೇಣುಕಾಚಾರ್ಯ, ಶ್ರೀರಾಮುಲುಎಸ್.ವಿ.ರಾಮಚಂದ್ರ, ಎನ್.ಆರ್.ರಮೇಶ್, ಎಸ್.ಆರ್.ವಿಶ್ವನಾಥ, ಕೆ.ಎಸ್.ಈಶ್ವರಪ್ಪ ಮೊದಲಾದವರು ಭರ್ಜರಿ ಕಾರ್ಯಕ್ರಮ ಮಾಡಿದ್ದಾರೆ.

ಬೆಳಗಾವಿ ಶಾಸಕ ಅನಿಲ ಬೆನಕೆ ಯಾವುದೇ ನಿಯಮ ಪಾಲಿಸದೆ ಎಮ್ಮೆ ಓಡಿಸುವ ಸ್ಪರ್ಧೆ ಉದ್ಘಾಟಿಸಿದ್ದಾರೆ.

  ಬಿಜೆಪಿ ನಾಯಕರು, ಶಾಸಕರು, ಕಾರ್ಯಕರ್ತರು ಸರಕಾರ ರೂಪಿಸಿರುವ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಅನುಮತಿ ಪಡೆಯದೆ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್‌ ದೂರಿದೆ.

ಕಾಂಗ್ರೆಸ್‌ ‘ನಮ್ಮ ನೀರು ನಮ್ಮ ಹಕ್ಕು’ ಹೆಸರಿನಡಿ ಮೇಕೆದಾಟು ಪಾದಯಾ ತ್ರೆಯನ್ನು ಸಂಗಮದಿಂದ ಆರಂಭಿಸಿತ್ತು. ಇದು ಪೂರ್ವ ನಿಗದಿತ ಕಾರ್ಯಕ್ರಮವಾಗಿತ್ತು. ಪಾದಯಾತ್ರೆಯಲ್ಲಿ ಕೋವಿಡ್‌ ನಿಯಮ ಪಾಲಿಸಿದ್ದರೂ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ನಾಯಕರ ವಿರುದ್ಧ ಪೊಲೀಸರು ಹಲವು ಎಫ್‌ಐಆರ್‌ ದಾಖಲಿಸಿದ್ದಾರೆ. ಆ ಮೂಲಕ ಕೋವಿಡ್‌ ಹರಡಲು ಕಾಂಗ್ರೆಸ್‌ ಕಾರಣ ಎಂದು ಬಿಜೆಪಿ ಬಿಂಬಿಸುತ್ತಿದ್ದರೂ ನೆಲದ ಕಾನೂನಿಗೆ ಕಾಂಗ್ರೆಸ್‌ ತಲೆಬಾಗಿದೆ,” ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಬಿಜೆಪಿ ಮುಖಂಡರ ಮೇಲೆ ಎಫ್‌ಐಆರ್‌ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನಿಯಮ ಉಲ್ಲಂಘನೆಯಾದರೂ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಜರುಗಿಸದೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು  ಎಂದು ನಿಯೋಗ ಆಗ್ರಹಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿದ ಒತ್ತಡ: ಶಾಸಕ ಅನಿಲ ಬೆನಕೆ ವಿರುದ್ಧ ದಾಖಲಾಗುತ್ತಾ FIR?

ಬೆಳಗಾವಿ ಜಿಲ್ಲೆಯಲ್ಲಿ 418 ಜನರಿಗೆ ಕೊರೋನಾ ದೃಢ; ಯಾವ ತಾಲೂಕಲ್ಲಿ ಎಷ್ಟು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button