ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ಸಂಕಷ್ಟದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಜೊತೆಗೆ ದಿನಸಿ, ಇಂಧನ ಸೇರಿದಂತೆ ವಿವಿಧ ಬೆಲೆ ಏರಿಕೆ ಮತ್ತಷ್ಟು ಕಂಗೆಡಿಸಿದೆ.
ಇವೆಲ್ಲದರ ಮಧ್ಯೆ ಈಗ ಮತ್ತೆ ಎರಡು ಅಗತ್ಯ ವಸ್ತು, ಸೇವೆಗಳ ಬೆಲೆ ಏರಿಕೆಗೆ ಸಿದ್ಧತೆ ನಡೆದಿದೆ. ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆಗೆ ಮುಖ್ಯಮಂತ್ರಿಗಳ ಬಳಿ ಕೆಎಂಎಫ್ ಪ್ರಸ್ತಾಪ ಇಟ್ಟಿದೆ. ಪ್ರತಿ ಲೀಟರ್ ಗೆ 3 ರೂ. ಏರಿಕೆ ಮಾಡಲು ಒಪ್ಪಿಗೆ ನೀಡುವಂತೆ ಕೇಳಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೆಲವು ದಿನಗಳ ಹಿಂದೆ ತಿಳಿಸಿದ್ದಾರೆ. ಏರಿಕೆಯಾದ ಬೆಲೆಯನ್ನು ನೇರವಾಗಿ ಹಾಲು ಉತ್ಪಾದಕರಿಗೆ ಕೊಡಲಾಗುವುದು ಎಂದೂ ಹೇಳಿದ್ದಾರೆ.
ಇದರ ಬೆನ್ನಿಗೇ, ವಿದ್ಯುತ್ ದರ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ ತಿಳಿಸಿದ್ದಾರೆ. ವಿವಿಧ ವಿದ್ಯುತ್ ಕಂಪನಿಗಳು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ದರ ಏರಿಕೆ ಅನಿವಾರ್ಯ ಎಂದು ತಿಳಿಸಿದ್ದಾರೆ. ಜೊತೆಗೆ, ಸರಕಾರಿ ಸಂಸ್ಥೆಗಳಿಂದಲೇ 12 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ ಎಂದೂ ತಿಳಿಸಿದ್ದಾರೆ.
ಹಾಲು ಮತ್ತು ವಿದ್ಯುತ್ ಎರಡೂ ಜನಸಾಮಾನ್ಯರಿಗೆ ಅಗತ್ಯವಾದವುಗಳು. ನೇರವಾಗಿ ಜನಸಾಮಾನ್ಯರ ಜೇಬಿಗೆ ಬಿಸಿ ತಟ್ಟುವಂತವು. ಈಗಾಗಲೆ ಈ ಎರಡರ ಬೆಲೆ ಏರಿಕೆಗೆ ಬಹುತೇಕ ನಿರ್ಧಾರವಾಗಿದೆ.
ಕೊರೋನಾ, ವೀಕೆಂಡ್ ಕರ್ಫ್ಯೂ ಮತ್ತಿತರ ಕಾರಣದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಬೆಲೆ ಏರಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಲಿದೆ. ಮುಖ್ಯಮಂತ್ರಿಗಳ ನಿರ್ಧಾರ ಏನಿರಲಿದೆ ಕಾದು ನೋಡಬೇಕಿದೆ.
24 ಗಂಟೆಯಲ್ಲಿ 3,37,704 ಜನರಲ್ಲಿ ಹರಡಿದ ಕೊರೊನಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ