ಲೈಂಗಿಕ ಕಾರ್ಯಕರ್ತೆಯ ಶೈಲಿ ನಕಲು ಮಾಡಿದ ಪುಟ್ಟ ಬಾಲಕಿ ; ಗಂಗೂಬಾಯಿ ಕಾಟಿಯಾವಾಡಿ ಚಲನ ಚಿತ್ರದ ಪ್ರಭಾವ, ಸಿಡಿದೆದ್ದ ಕಂಗನಾ

ಪ್ರಗತಿವಾಹಿನಿ ಸುದ್ದಿ ಮುಂಬೈ – ಗಂಗೂಬಾಯಿ ಕಾಟಿಯಾವಾಡಿ ಚಲನಚಿತ್ರದಲ್ಲಿ ಆಲಿಯಾ ಭಟ್ ನಿರ್ವಹಿಸಿರುವ ಲೈಂಗಿಕ ಕಾರ್ಯಕರ್ತೆ ಗಂಗೂಬಾಯಿಯ ಹಾವ ಭಾವಗಳನ್ನು ಪುಟ್ಟ ಬಾಲಕಿಯೊಬ್ಬಳು ಅನುಕರಣೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸದಾ ವಿವಾದಾತ್ಮಕ ಹೇಳಿಕೆ ನೀಡುವ ಕಂಗನಾ ರಾಣಾವತ್ ಸಹ ವಿಡಿಯೋ ಕುರಿತು ಕಿಡಕಾರಿದ್ದು, ಈ ಬಾಲಿಕಯ ಪೋಷಕರಿಗೆ ಎಚ್ಚರಿಕೆ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್ ಗಂಗೂಬಾಯಿಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಗಂಗೂಬಾಯಿ ಪಾತ್ರಧಾರಿ ಆಲಿಯಾ ಬಾಯಲ್ಲಿ ಬೀಡಿ ಇಟ್ಟುಕೋಡು ಮಾತನಾಡುವ ದೃಷ್ಯವಿದ್ದು ಪುಟ್ಟ ಬಾಲಕಿ ಅದೇ ರೀತಿ ಬಾಯಲ್ಲಿ ಇಟ್ಟುಕೊಂಡು ಅನುಕರಣೆ ಮಾಡಿದ್ದಾಳೆ. ಬಾಲಕಿಗೆ ಈ ರೀತಿ ಮಾಡಲು ಅವಕಾಶ ಕೊಟ್ಟ ತಂದೆ ತಾಯಿಯ ಬಗ್ಗೆ ಕಂಗನಾ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ಸಣ್ಣ ಬಾಲಕಿ ಸೆಕ್ಸ್ ವರ್ಕರ್ ಅನುಕರಣೆ ಮಾಡುವುದು ಸರಿಯೇ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಗಂಗೂಬಾಯಿ ಆ ಕಾಲದಲ್ಲಿ ದೇಶದ ರಾಜಕೀಯ ನಾಯಕರೊಬ್ಬರಿಗೆ ಲೈಂಗಿಕ ಕಾರ್ಯಕರ್ತೆಯರನ್ನು ಪೂರೈಸುತ್ತಿದ್ದಳು, ಅವಳ ಜೀವನ ಬೇರೆಯವರಿಗೆ ಮಾದರಿಯಲ್ಲ, ಅಂಥದ್ದರಲ್ಲಿ ಇಷ್ಟು ಸಣ್ಣ ಹುಡುಗಿಯ ಕೈಯ್ಯಲ್ಲಿ ಅಂತಹ ಪಾತ್ರದ ಅನುಕರಣೆ ಮಾಡಿಸುವುದು, ಬಾಯಲ್ಲಿ ಬೀಡಿ ಇರಿಸುವುದು ಸರಿಯಲ್ಲ ಎಂದು ಕಂಗನಾ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಬಾಲಕಿ ಬೀಡಿ ಬಾಯಲ್ಲಿ ಇಟ್ಟುಕೊಂಡು ಗಂಗೂಬಾಯಿ ಪಾತ್ರದ ಅನುಕರಣೆ ಮಾಡಿರುವ ಫೋಟೊವನ್ನು ತಮ್ಮ ಹೇಳಿಕೆಯ ಸಮೇತ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಂಗನಾ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.