ಹಿಜಾಬ್ ತೆಗೆಯಲ್ಲ ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು; ಯುವಕರಿಂದಲೂ ಧರಣಿಗೆ ಸಾಥ್; ಬೆಳಗಾವಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹೈ ಡ್ರಾಮಾ

ಪ್ರಗತಿವಾಹಿನಿಸುದ್ದಿ, ಬೆಳಗಾವಿ / ವಿಜಯಪುರ/ ಬಳ್ಳಾರಿ : ಹಿಜಾಬ್ ವಿವಾದ ರಾಜ್ಯದ ಕೆಲವೆಡೆ ಗುರುವಾರವೂ ಮುಂದುವರೆದಿದೆ. ಬೆಳಗಾವಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿಯ ಸದಾಶಿವನಗರದ ವಿಜಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲೂ ಹಿಜಾಬ್ ಗೊಂದಲ ಮುಂದುವರೆದಿದೆ. ಇಂದು ಕಾಲೇಜಿಗೆ ಹಿಜಾಬ್ ಧರಿಸಿ ಬಂದ 20 ವಿದ್ಯಾರ್ಥಿನಿಯರನ್ನು ತಡೆದ ಕಾಲೇಜಿನ ಸಿಬ್ಬಂದಿ ಹಿಜಾಬ್ ತೆಗೆದು ಕ್ಲಾಸಿಗೆ ಬರುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೆಲ ಯುವಕರು ಪ್ರತಿಭಟನೆಗೆ ಸಾಥ್ ನೀಡಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಯುವಕರು ಸ್ಥಳದಲ್ಲಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಎಪಿಎಂಸಿ ಠಾಣಾ ಪೊಲೀಸರು 6 ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಸಮಾಜದ ಮುಖಂಡರು ಆಗಮಿಸುತ್ತಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇನ್ನು ವಿಜಯಪುರ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ನಿನ್ನೆ ವಿದ್ಯಾರ್ಥಿನಿಯರು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಂದು ಕೂಡ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಶಾಲಾ-ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಳ್ಳಾರಿ ಸರಳಾದೇವಿ ಕಾಲೇಜು ಗ್ರಂಥಪಾಲಕಿಯೊಬ್ಬರು ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲು ಅವಕಾಶ ಕೊಡಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಗ್ರಂಥಪಾಲಕಿ ನಡೆಗೆ ಪೊಲಿಸ್ ಸಿಬ್ಬಂದಿಗಳು ಕಂಗಾಲಾಗಿದ್ದು, ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ತಾನು ಹಿಜಾಬ್ ತೆಗೆಯುವುದಿಲ್ಲ ಎಂದು ಗ್ರಂಥಪಾಲಕಿ ಒಂದೇ ಸಮನೆ ಅತ್ತಿದ್ದಾರೆ.
ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಹಲವು ಜಿಲ್ಲೆಗಳಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದ್ದರೆ, ಇನ್ನು ಕೆಲ ಜಿಲ್ಲೆಗಳಲ್ಲಿ ವಿವಾದ ನಡುವೆಯೂ ತರಗತಿಗಳು ನಡೆಯುತ್ತಿವೆ.
ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; ಸಚಿವ ಈಶ್ವರಪ್ಪ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ