ತಾಲ್ಲೂಕು ಮಟ್ಟದಲ್ಲೂ ಪ್ರಗತಿ ಪರಿಶೀಲನಾ ಸಭೆ
ವಿಜಯನಗರ – ಹೊಸಪೇಟೆ : ನೂತನ ಜಿಲ್ಲೆ ವಿಜಯನಗರ ವನ್ನು ಸಮಗ್ರ ಅಭಿವೃದ್ಧಿಗೊಳಿಸಲು 120 ಕಿಮೀ ವೇಗದಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅ. ಜೊಲ್ಲೆ ಹೇಳಿದರು.
ಇಂದು ವಿಜಯನಗರ ಜಿಲ್ಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕರಾದ ನಡೆಸಿದ ಮೊದಲ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ನೂತನ ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮವಾಗಿ ಸ್ಪಂದಿಸುವ ಅಗತ್ಯವಿದೆ. ಜಿಲ್ಲೆಯ ಅಭಿವೃದ್ಧಿ ಗೆ ಅಗತ್ಯವಿರುವ ಸಲಹೆ ಮತ್ತು ಸಹಕಾರವನ್ನ ಜಿಲ್ಲೆಯ ಜನಪ್ರತಿನಿಧಿಗಳು, ಸಚಿವ ಆನಂದ್ ಸಿಂಗ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿದ್ದಾರೆ. ಆದರೆ ಜಿಲ್ಲೆಯ ಅಧಿಕಾರಿಗಳ ಸಹಕಾರ ಹಾಗೂ ಒತ್ತಾಸೆ ಇಲ್ಲದೆ ಹೆಚ್ಚಿನದ್ದನ್ನು ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಇಬ್ಬರು ಸಹಕಾರದಿಂದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಹೇಳಿದರು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಸಚಿವರು ಪಡೆದುಕೊಂಡರು. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ 20ರಷ್ಟು ಹೆಚ್ಚಿನ ಮಳೆ ಆಗಿರುವುದು ಸಂತಸದ ವಿಷಯ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ದ ವತಿಯಿಂದ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳು ಇವೆ. ಇವುಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಿ ರೈತರಿಗೆ ಅನುಕೂಲ ಕಲ್ಪಿಸುಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಪಡಿತರ ಚೀಟಿ ಹೊಂದಿರುವ ಸರಕಾರಿ ನೌಕರರ ವಿರುದ್ಧ ಕೂಡಲೇ ನಿಯಮಾವಳಿಗಳ ಪ್ರಕಾರ ಕೈಗೊಳ್ಳಬೇಕು. ಅವರಿಂದ ಸಂಗ್ರಹಿಸಬೇಕಾದ ದಂಡವನ್ನು ಕಟ್ಟುನಿಟ್ಟಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರಿಯಾದ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ಸಚಿವರು:
ಜಿಲ್ಲೆಯಲ್ಲಿ ವಿವಿಧ ನಿರ್ಮಾಣದ ಹಂತದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಟ್ಟಡಗಳ ಬಗ್ಗೆ ಸಭೆಗೆ ಸರಿಯಾದ ಮಾಹಿತಿಯನ್ನು ನೀಡಲು ವಿಫಲರಾದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡುವುದು ಸರಿಯಲ್ಲ. ಅಧಿಕಾರಿಗಳು ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ಯನ್ನು ತರಬೇಕು. ಇಲ್ಲದಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಶಿಕ್ಷಕರ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಳೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಕೊರತೆ ನಿವಾರಿಸಲು ಡಿಡಿಪಿಐ ಗೆ ಸಚಿವರು ಸೂಚನೆ ನೀಡಿದರು.
ತಾಲ್ಲೂಕು ಮಟ್ಟದ ದಲ್ಲಿ ಪ್ರಗತಿ ಪರಿಶೀಲನಾ ಸಭೆ:
ವಿಧಾನ ಮಂಡಲದ ಬಜೆಟ್ ಅಧಿವೇಶನದ ನಂತರ ಮತ್ತೊಮ್ಮೆ ಜಿಲ್ಲಾಮಟ್ಟದ ಸಭೆಯನ್ನು ನಡೆಸಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳನ್ನು ತಿಳಿದುಕೊಳ್ಳಲು ತಾಲ್ಲೂಕು ಮಟ್ಟದಲ್ಲೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಇದರಿಂದ ಆಯಾ ತಾಲ್ಲೂಕಿನ ಸಮಸ್ಯೆಗಳು ಸಮರ್ಪಕವಾಗಿ ತಿಳಿದು ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾನು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಗಳೊಂದಿಗೆ ವಿವರವಾಗಿ ಚರ್ಚಿಸಿದ್ದೇನೆ. ಕಾನೂನಾತ್ಮಕ ತೊಡಕುಗಳನ್ನು ಶೀಘ್ರದಲ್ಲೇ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿರುವ ಮಾಹಿತಿ ಸಿಕ್ಕ ತಕ್ಷಣ ನಮ್ಮ ಜಿಲ್ಲಾಡಳಿತ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರುಗಳನ್ನು ಸುರಕ್ಷಿತ ಸ್ಥಳ ತಲುಪಲು ನೆರವಾಗುವಂತೆ ಉತ್ತಮ ಸಮಾನ್ವಯ ಕಾರ್ಯನಿರ್ವಹಿಸಿದೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ ನಾನು ಅಭಿನಂದನೆ ಸಲ್ಲಿಸಿದ್ದೇನೆ. ವಿಕಾಸ್, ಸಂಜಯ್ ಮತ್ತು ನಂದಿನಿ ಅವರು ಸುರಕ್ಷಿತವಾಗಿ ಹಂಗೇರಿ ದೇಶವನ್ನು ಮತ್ತು ಲಾವಣ್ಯ ಅವರು ರೋಮನಿಯಾ ದೇಶವನ್ನು ತಲುಪಿದ್ದಾರೆ. ಅಲ್ಲಿಂದ ಸದ್ಯದಲ್ಲೇ ರಾಜ್ಯಕ್ಕೆ ಬರಲಿದ್ದಾರೆ. ಈ ಬಗ್ಗೆ ಗಮನವಿರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು ಹೇಳಿದರು.
ಸಭೆಯಲ್ಲಿ ಸಂಸದರಾದ ದೇವೇಂದ್ರಪ್ಪ, ಶಾಸಕರಾದ ಕರುಣಾಕರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ರಾದ ಸತೀಶ್, ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರ್ಷ ಗೋಯಲ್ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ