ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : ಶಾಲೆಯ ಎದುರೇ ರಸ್ತೆ ಅಪಘಾತಕ್ಕೆ ಬಾಲಕ ಬಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಲೆಯಿಂದ ಹೊರಬರುತ್ತಿದ್ದ 8 ವರ್ಷದ ಬಾಲಕನೋರ್ವ ರಸ್ತೆ ಅಪಘಾತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸೋಮವಾರ ಬೆಳಗಾವಿಯಲ್ಲಿ ನಡೆದಿದೆ.
ಗೋಕಾಕ ರಸ್ತೆಯ ಪಕ್ಕದಲ್ಲಿರುವ ಲಿಟ್ಲ್ ಸ್ಕಾಲರ್ ವಿದ್ಯಾಲಯದ ಎದುರೇ ಈ ದುರ್ಘಟನೆ ನಡೆದಿದೆ. ಅಬ್ದುಲ್ ರೆಹಮಾನ್ ಬಾಗಲಕೋಟೆ ಮೃತ ಬಾಲಕ. ಬಾಲಕ ರಸ್ತೆ ದಾಟುತ್ತಿರುವಾಗ ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ಶಾಲೆ ಮುಗಿದ ಬಳಿಕ ಬಾಲಕನ ತಂದೆ ಮಗುವನ್ನು ಕರೆದೊಯ್ಯಲು ಬಂದಿದ್ದಾರೆ. ರಸ್ತೆಯ ಇನ್ನೊಂದು ಬದಿಗೆ ಬಾಲಕನ ತಂದೆ ನಿಂತಿದ್ದಾರೆ. ಬಾಲಕನ ತಂದೆ ನಿಂತಿದ್ನನ್ನು ನೋಡಿ ಓಡಿ ಹೋಗಿದ್ದಾನೆ. ತಂದೆ ಅಲ್ಲೇ ನಿಲ್ಲುವಂತೆ ಕೈ ಮಾಡುತ್ತಿದ್ದರೂ ಪ್ರಯೋಜನವಾಗಲಿಲ್ಲ.
18 ವರ್ಷದ ಹಿಂದೆ ಆರಂಭವಾಗಿರುವ ಲಿಟ್ಲ್ ಸ್ಕಾಲರ್ ವಿದ್ಯಾಲಯ 5 ವರ್ಷದಿಂದ ಈ ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. 1ರಿಂದ 10ನೇ ತರಗತಿವರೆಗೆ 2000 ಮಕ್ಕಳು ಇಲ್ಲಿ ಓದುತ್ತಿದ್ದಾರೆ.
ಶಾಲೆಗೆ ಸರಿಯಾದ ಕಂಪೌಂಡ್ ಗೋಡೆ ಇಲ್ಲದಿರುವುದರಿಂದ ಮಕ್ಕಳು ನೇರವಾಗಿ ರಸ್ತೆಗೆ ಬರುವಂತಾಗಿದೆ. ಇದರಿಂದ ಜೀವವೊಂದು ಬಲಿಯಾಗಿದೆ ಎಂದು ಸ್ಥಳೀಯರೋರ್ವರು ಪ್ರಗತಿವಾಹಿನಿಗೆ ದೂರಿದರು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಒಂದರ ಮೇಲೊಂದು ಫ್ಲೋರ್ ಕಟ್ಟಲಾಗುತ್ತಿದೆ. ಅದೇ ವೇಳೆ ಕಂಪೌಂಡ್ ವಾಲ್ ಕಟ್ಟಲೂ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದರು.
ಈ ಕುರಿತು ಪ್ರಗತಿವಾಹಿನಿ ಶಾಲೆಯ ಪ್ರಿನ್ಸಿಪಾಲ್ ಶೀಬಾ ಅವರನ್ನು ಪ್ರಶ್ನಿಸಿದಾಗ, ಇದೊಂದು ದುರದೃಷ್ಟಕರ ಘಟನೆ. ಶಾಲೆಯ ಹಿಂದೆ ಸಾಕಷ್ಟು ಜಾಗವಿದೆ. ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶಾಲೆಯನ್ನು 2 ಶಿಫ್ಟ್ ಮೇಲೆ ಬಿಡಲಾಗುತ್ತಿದ್ದು ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಮಧ್ಯದಲ್ಲಿ ರಸ್ತೆ ಬಂದಿರುವುದರಿಂದ ಕಂಪೌಂಡ್ ವಾಲ್ ಹಾಕಲು ಸಮಸ್ಯೆ ಇದೆ ಎಂದರು.
ಬೆಳಗಾವಿ ಜಿಲ್ಲಾದ್ಯಂತ ಅನಿರ್ಧಿಷ್ಟಾವಧಿ ನಿಷೇಧಾಜ್ಞೆ; ಜಿಲ್ಲಾಧಿಕಾರಿ ಹಠಾತ್ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ