ಇದೇ ಮಾರ್ಚ್ ೨೦ ಕ್ಕೆ ಸಂತ ತುಕಾರಾಮ ಮಹಾರಾಜರ ಪುಣ್ಯತಿಥಿ. ಈ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಲೇಖನ
ಸಾಧನೆ ಮಾಡಿದ ನಂತರ ನಮ್ಮ ಬುದ್ಧಿಯು ಸೂಕ್ಷ್ಮವಾಗುತ್ತದೆ, ಅಂದರೆ ನಮಗೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ ಸಂವೇದನೆಗಳ ಅರಿವಾಗುತ್ತದೆ. ಕೆಲವು ಸಂತರು ಓರ್ವ ವ್ಯಕ್ತಿಯ ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಹೇಳುತ್ತಾರೆ, ಇದನ್ನೇ ಸೂಕ್ಷ್ಮದ ಜ್ಞಾನ ಎಂದು ಹೇಳುತ್ತಾರೆ. ನಾವು ಈ ಪ್ರಸಂಗದ ಮೂಲಕ ಸಾಮಾನ್ಯ ಮನುಷ್ಯನಂತೆ ಕಾಣುವ ಸಂತ ತುಕಾರಾಮ ಮಹಾರಾಜರು ಜನಹಿತಕ್ಕಾಗಿ ಈ ಜ್ಞಾನವನ್ನು ಹೇಗೆ ಉಪಯೋಗಿಸಿದರು ಎಂಬುದನ್ನು ತಿಳಿಯೋಣ.
ಸಂತ ತುಕಾರಾಮ ಮಹಾರಾಜರು ದೇಹು ಎಂಬ ಊರಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆ ಊರಿನಲ್ಲಿ ಓರ್ವ ಸಾಧು ಬರುವವನಿದ್ದಾನೆ ಎಂಬ ಸುದ್ದಿ ಹರಡಿತು. ಸಾಧುವಿನ ಸ್ವಾಗತಕ್ಕಾಗಿ ಊರಿನ ಜನರು ದೊಡ್ಡ ಮಂಟಪವನ್ನು ನಿಲ್ಲಿಸಿದರು. ಅವರ ದರ್ಶನ ಪಡೆಯಲು ಬಹಳ ಜನ ನೆರೆದಿದ್ದರು. ಎಲ್ಲರೂ ಅವರ ಗುಣಗಾನ ಮಾಡುತ್ತಿದ್ದರು. ಆ ಸಾಧುವಿನ ದರ್ಶನದಿಂದ ನಮ್ಮ ಎಲ್ಲ ಇಚ್ಛೆಗಳು ಪೂರ್ಣಗೊಳ್ಳುವವು, ಎಂಬ ಸುದ್ದಿ ಊರಿನಲ್ಲೆಲ್ಲ ಹರಡಿತ್ತು. ಊರಿನಲ್ಲಿ ಸಾಧುಗಳು ಪ್ರತ್ಯಕ್ಷ ಬಂದಾಗ ಪ್ರತಿಯೊಬ್ಬರೂ ಅವರ ದರ್ಶನಕ್ಕೆ ಹೋಗಿ ದಕ್ಷಿಣೆಯನ್ನು ಕೊಟ್ಟು ವಿಭೂತಿ ಮತ್ತು ಪ್ರಸಾದ ತೆಗೆದುಕೊಳ್ಳಲು ಆರಂಭಿಸಿದರು. ಊರ ಜನರು ‘ಮನೆಯಲ್ಲಿ ಲಕ್ಷ್ಮೀ ನೆಲೆಸಲಿ, ಹೊಲಗಳಲ್ಲಿ ಬೆಳೆ ಸಮೃದ್ಧವಾಗಿ ಬರಲಿ, ಬಾವಿಯಲ್ಲಿ ನೀರು ಬರಲಿ’ ಇಂತಹ ಅನೇಕ ವ್ಯಾವಹಾರಿಕ ಅಡಚಣೆಗಳನ್ನು ಸಾಧುವಿನ ಬಳಿ ವ್ಯಕ್ತಪಡಿಸುತ್ತಿದ್ದರು. ಸಾಧು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿದ್ದನು. ಬರುವ ಜನರು ಅವನ ಕಾಲಮೇಲೆ ತಲೆ ಇಟ್ಟು ತಮ್ಮ ಅಡಚಣೆಗಳನ್ನು ಹೇಳಿಕೊಳ್ಳುತ್ತಿದ್ದರು. ಅಡಚಣೆಗಳನ್ನು ಕೇಳಿದ ನಂತರ ಆ ಸಾಧು ಅವರಿಗೆ ವಿಭೂತಿಯನ್ನು ಹಚ್ಚುತ್ತಿದ್ದನು. ಅದರ ಬದಲಾಗಿ ಜನರಿಗೆ ಅವನಿಗೆ ದಕ್ಷಿಣೆ ಕೊಡಬೇಕಾಗುತ್ತಿತ್ತು. ಅನಂತರ ಆ ಸಾಧು ಅವರಿಗೆ ಆಶೀರ್ವಾದ ಕೊಡುತ್ತಿದ್ದನು.
ತುಕಾರಾಮ ಮಹಾರಾಜರಿಗೆ ಈ ಸುದ್ಧಿ ತಿಳಿಯಿತು. ಆಗ ಅವರು ಆ ಸಾಧುವಿನ ದರ್ಶನ ಪಡೆಯಬೇಕೆಂದು ನಿರ್ಧರಿಸಿದರು. ಸಾಧುವಿನ ದರ್ಶನಕ್ಕೆ ಬಹಳ ಜನಸಂದಣಿಯಿತ್ತು. ತುಕಾರಾಮ ಮಹಾರಾಜರು ಆ ಗದ್ದಲದಲ್ಲಿ ನಿಧಾನವಾಗಿ ದಾರಿ ಮಾಡಿಕೊಂಡು ಆ ಸಾಧುವಿನ ಎದುರು ಬಂದು ಕುಳಿತರು. ಸಾಧು ಕಣ್ಣುಮುಚ್ಚಿ ಆರಾಮವಾಗಿ ಕುಳಿತಿದ್ದನು. ಅರ್ಧಗಂಟೆಯಾದರೂ, ಅವನು ಕಣ್ಣು ತೆರೆದಿರಲಿಲ್ಲ. ಜನರು ‘ಸಾಧು ಯಾವಾಗ ಕಣ್ಣು ತೆರೆಯುವನು ಮತ್ತು ನಮ್ಮ ಮೇಲೆ ಅವನ ದಿವ್ಯದೃಷ್ಟಿ ಯಾವಾಗ ಬೀಳುವುದು,’ ಎಂಬುದಾಗಿ ಕುತೂಹಲದಿಂದ ದಾರಿ ಕಾಯುತ್ತಿದ್ದರು. ತುಕಾರಾಮ ಮಹಾರಾಜರಿಗಂತೂ ಈ ಸಾಧುವಿನ ಬಗ್ಗೆ ಪೂರ್ಣ ಕಲ್ಪನೆಯಿತ್ತು.
ಕೆಲ ಸಮಯದ ನಂತರ ಸಾಧುವು ಕಣ್ಣು ತೆರೆದನು. ಕಣ್ಣು ತೆರೆದು ನೋಡಿದರೆ ಎದುರಿನಲ್ಲಿ ತುಕಾರಾಮ ಮಹಾರಾಜರು ಕುಳಿತಿದ್ದಾರೆ. ಅವನು ತುಕಾರಾಮ ಮಹಾರಾಜರಿಗೆ ‘ನೀವು ಯಾವಾಗ ಬಂದಿರಿ ?’ ಎಂದು ಕೇಳಿದನು. ತಕ್ಷಣ ತುಕಾರಾಮ ಮಹಾರಾಜರು ‘ಯಾವಾಗ ತಾವು ಕಣ್ಣು ಮುಚ್ಚಿ ಮನಸ್ಸಿನಲ್ಲಿ ವಿಚಾರ ಮಾಡುತ್ತಿದ್ದಿರೋ ‘ಈ ಊರು ಚೆನ್ನಾಗಿದೆ, ಇಲ್ಲಿಯ ಭೂಮಿಯು ಫಲವತ್ತಾಗಿದೆ ಹಾಗೂ ತೋಟಗಾರಿಕೆಗೆ ಪೂರಕವಾಗಿದೆ. ಇಲ್ಲಿನ ಜನರೂ ನಮಗೆ ಬಹಳ ಗೌರವ ಕೊಡುತ್ತಿದ್ದಾರೆ, ಸಾಕಷ್ಟು ಕಾಣಿಕೆಯನ್ನೂ ಕೊಡುತ್ತಿದ್ದಾರೆ. ಆ ಕಾಣಿಕೆಯಿಂದ ಇಲ್ಲಿನ ಭೂಮಿಯನ್ನು ಖರೀದಿಸಿ ಇಲ್ಲಿ ಕಬ್ಬು ಬೆಳೆದರೆ ಒಳ್ಳೆಯ ಫಸಲು ಬರುವುದು. ಅದರಿಂದ ತಮಗೆ ಎಣಿಸಲಾಗದಷ್ಟು ಹಣ ದೊರೆಯುವುದು. ಆ ಹಣವನ್ನು ತಾವು ಎಣಿಸುತ್ತ ಕುಳಿತಿದ್ದಿರಿ’, ಆ ಸಮಯಕ್ಕೆ ನಾನು ಇಲ್ಲಿ ಬಂದೆನು.’ ಎಂದು ಹೇಳಿದರು. ಈ ಮಾತುಗಳನ್ನು ಕೇಳಿ ಆ ಢೋಂಗಿ ಸಾಧುವಿನ ಮುಖವು ಒಮ್ಮೆಲೆ ಬಿಳುಚಿಕೊಂಡಿತು. ಅವನ ಬಾಯಿಯಿಂದ ಒಂದು ಅಕ್ಷರವೂ ಹೊರಡಲಿಲ್ಲ. ಅವನು ಈಗ ಈ ಊರಿನಲ್ಲಿ ತನ್ನ ಸ್ಥಿತಿ ಏನಾಗುವುದು ಎಂಬುದನ್ನು ಅರಿತನು. ಅವನು ಮಾರನೆಯ ದಿನ ಸೂರ್ಯೋದಯದ ಮೊದಲೇ ತನ್ನ ಗಂಟು-ಮೂಟೆ ಕಟ್ಟಿ ಯಾರಿಗೂ ತಿಳಿಸದೆ ಅಲ್ಲಿಂದ ಹೊರಟು ಹೋದನು.
ನೋಡಿ, ಕಪಟ ಹೇಗೆ ಹೊರ ಬೀಳುತ್ತದೆ ! ಈಶ್ವರನು ಮಾತನಾಡುವುದಿಲ್ಲ; ಆದರೆ ಈಶ್ವರನ ಸಗುಣ ರೂಪವಾಗಿರುವ ಸಂತರು ಮಾತನಾಡಬಲ್ಲರು. ಸಂತರು ಸರಿಯಾಗಿ ಗುರುತಿಸುತ್ತಾರೆ. ತುಕಾರಾಮ ಮಹಾರಾಜರ ಕೃಪೆಯಿಂದ ಜನರು ಆ ಢೋಂಗಿ ಸಾಧುವಿನಿಂದ ಪಾರಾದರು.
ಆಧಾರ : HinduJagruti.org
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ