Kannada NewsKarnataka NewsLatest

ಶಾಲೆ ಹಾಗೂ ಶಿಕ್ಷಕರ ಅಸಮಾನ ಹಂಚಿಕೆ ಸರಿಪಡಿಸಲು ಪ್ರಯತ್ನ – ಅರುಣ ಶಹಾಪುರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅನೇಕ ಕಡೆ ಶಾಲೆ, ಕೊಠಡಿ ಹಾಗೂ ಶಿಕ್ಷಕರ ಅವಶ್ಯಕತೆ ಇದೆ. ಇನ್ನು ಕೆಲವು ಕಡೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇವೆಲ್ಲ ಇವೆ. ಈ ಅಸಮಾನತೆಯನ್ನು ಸರಿಪಡಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚನ್ನಮ್ಮನಗರ ಶಾಲೆಯ ಮುಖ್ಯಾಧ್ಯಾಪಕ ವಿ.ಎಂ.ಬೇವಿನಕೊಪ್ಪಮಠ ಅವರು ದಾನಿಗಳ ನೆರವಿನಂದಲೇ ಒಂದು ಕೊಠಡಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಈ ರೀತಿಯ ಜವಾಬ್ದಾರಿ ತೆಗೆದುಕೊಳ್ಳುವಿಕೆ ಮತ್ತು ಇಲ್ಲಿನ ಮಹಿಳೆಯರು ಸೇರಿದಂತೆ ಸಮುದಾಯದ ಕೈಜೋಡಿಸುವಿಕೆ ಆದರ್ಶವಾದದ್ದಾಗಿದೆ. ಸರಕಾರಿ ಶಾಲೆಯೆಡೆಗೆ ಮಕ್ಕಳನ್ನು ಆಕರ್ಷಿಸುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು.
ಚನ್ನಮ್ಮ ನಗರದ ಶಾಲೆಯಲ್ಲಿ 225 ವಿದ್ಯಾರ್ಥಿಗಳಿದ್ದು, 1ರಿಂದ 8ನೇ ತರಗತಿಯವರೆಗೆ ನಡೆಯುತ್ತಿದೆ. ಆದರೆ ಕೇವಲ 5 ಕೊಠಡಿಗಳಿರುವುದರಿಂದ ಕಲಿಕೆಗೆ ತೊಂದರೆಯಾಗುತ್ತಿರುವುದರಿಂದ ಇನ್ನೂ ಕೆಲವು ಕೊಠಡಿಗಳನ್ನು ಒದಗಿಸಲು ಸ್ಥಳೀಯ ಶಾಸಕ ಅಭಯ ಪಾಟೀಲ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಇಲ್ಲಿ 9ನೇ ತರಗತಿ ಇಲ್ಲದಿರುವುದರಿಂದ ಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ 9ನೇ ತರಗತಿ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅರುಣ ಶಹಾಪುರ ಭರವಸೆ ನೀಡಿದರು.
ಸಿಆರ್ ಪಿ ಜಗಜಂಪಿ ಮಾತನಾಡಿ, ಚನ್ನಮ್ಮ ನಗರ ಶಾಲೆ ನಗರದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಇಲ್ಲಿನ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಅತ್ಯಂತ ಶಿಸ್ತಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಶಾಲೆಗೆ ಬರುವ ಅತ್ಯಂತ ಹಿಂದುಳಿದ ಹಾಗೂ ಬಡ ಮಕ್ಕಳ ಕಲಿಕೆಗೆ ಸಾಮೂಹಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈ ಶಾಲೆಗೆ ಇಲಾಖೆಯಿಂದ ಎಲ್ಲ ರೀತಿಯ ನೆರವು ಒದಗಿಸಲಾಗುವುದು ಎಂದರು.
​ಶಾಲಾ ಕೊಠಡಿ ನಿರ್ಮಿಸಲು ಆರ್ಥಿಕ ಸಹಾಯ ಹಾಗೂ ವಸ್ತು ರೂಪದಲ್ಲಿ ನೆರವು ​ನೀಡಿದ ನಿತ್ಯಾನಂದ ಪ್ರಭು, ಚೇಂಬರ್ ಆಫ್ ಕಾಮರ್ಸ್ ಚೇರಮನ್ ರೋಹನ್ ಜುವಳಿ ಮತ್ತು ನಿರ್ದೇಶಕ ಪ್ರಭಾಕರ ನಾಗರಮುನ್ನೋಳಿ, ಶೃತಿ ಕನಸ್ಟ್ರಕ್ಷನ್ ನ ಮದನಕುಮಾರ ಭೈರಪ್ಪನವರ್, ಸ್ನೇಹಾ ರಾವ್, ಸುಷ್ಮಾ ಪಾಟೀಲ, ನಿಧಿ ಬಾಟೆ, ರಜನಿ ರಾವ್, ಮಹೇಶ ಇನಾಮದಾರ, ಗಿರೀಶ್ ಪೈ, ರಾಧಿಕಾ ಮಿರ್ಜಿ, ರಾಜು ಕಾಣಕೋಣಕರ್, ಭರತ್ ದೇಶಪಾಂಡೆ, ಎಸ್.ಎ.ಚಿಕೋರ್ಡೆ, ರೂಪಾ ಬದನ್, ಸುರೇಶ ಪ್ರಭು, ಡಾ.ಸಂಗೀತಾ ನಾಯಕ, ಸಾಯಿರಾ ರಂಗರೇಜ್, ಕೊಠಡಿ ನಿರ್ಮಾಣಕ್ಕೆ ಎಲ್ಲ ಪ್ರಯತ್ನ ಮಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ ಗೋಕಾಕ, ಪತ್ರಕರ್ತ ಎಂ.ಕೆ.ಹೆಗಡೆ, ಜ್ಯೋತ್ಸ್ನಾ ಪೈ, ಶೀಲಾ ದೇಶಪಾಂಡೆ, ಮುಖ್ಯಾಧ್ಯಾಪಕ ವಿ.ಎಂ.ಬೇವಿನಕೊಪ್ಪಮಠ ಮೊದಲಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
​ಮುಖ್ಯಾಧ್ಯಾಪಕ ಎಂ.ವಿ.ಬೇವಿನಕೊಪ್ಪಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಅಭಯ ಪಾಟೀಲ ಅವರು ತುರ್ತಾಗಿ ಬೆಂಗಳೂರಿಗೆ ತೆರಳಿರುವುದರಿಂದ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಸಧ್ಯದಲ್ಲೇ ಅವರನ್ನು ಕರೆಸಿ ಶಾಲೆಯ ಕಂಪೌಂಡ್ ವಾಲ್ ಪೂಜೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು. ಶಿಕ್ಷಕಿ ಎಸ್.ಐ.ಯಡವಣ್ಣವರ್ ಕಾರ್ಯಕ್ರಮ ನಿರೂಪಿಸಿದರು. ​

ಬಂಡವಾಳ ಹೂಡಿಕೆದಾರರ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ ಕರ್ನಾಟಕ ?

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button