ರೊಚ್ಚಿಗೆದ್ದ ಕಾರ್ಯಕರ್ತರು: ಸಭೆಯಿಂದ ಎದ್ದು ಹೋದ ಕುಮಾರಸ್ವಾಮಿ

ಪ್ರಗತಿ ವಾಹಿನಿ ಸುದ್ದಿ ಕನಕಪುರ – 

ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಕನಕಪುರದ ಬಿಡದಿ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಅದ್ವಾನವಾಗಿದೆ. ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಲ್ಲದೆ ರೊಚ್ಚಿಗೆದ್ದ ಕಾರಣ ಕುಮಾರಸ್ವಾಮಿ ಸಭೆಯಿಂದ ಅರ್ಧಕ್ಕೆ ಎದ್ದು ಹೊರನಡೆದಿದ್ದಾರೆ.

ಸಭೆಯಲ್ಲಿ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕನಕಪುರದಲ್ಲಿ ಪಕ್ಷದ ಸಂಘಟನೆಗೆ ನಿಮ್ಮಿಂದ ಪ್ರಯತ್ನವೇ ಆಗುತ್ತಿಲ್ಲ, ನಮ್ಮನ್ನು ಕೇಳುವವರು ಇಲ್ಲದಂತಾಗಿದೆ, ಪಕ್ಷದ ಮೇಲಿನ ಅಭಿಮಾನದಿಂದ ನಾವು ಕೆಳ ಹಂತದ ಕಾರ್ಯಕರ್ತರು ಜಗಳ ಮಾಡಿಕೊಂಡು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದರೂ ಯಾರೂ ಕೂಡ ನಮ್ಮ ಬೆಂಬಲಕ್ಕೆ ಬಂದಿಲ್ಲ ಎಂದು ಕಿಡಿ ಕಾರಿದರು.

ಕಳೆದ ೩೦ ವರ್ಷಗಳಿಂದ ಕ್ಷೇತ್ರದಲ್ಲಿ ಇದೇ ರೀತಿ ಮುಂದುವರೆದಿದೆ. ಡಿ.ಕೆ. ಸಹೋದರರ ಎದುರು ಪಕ್ಷ ನೆಲೆ ಕಳೆದುಕೊಳ್ಳುತ್ತಿದೆ. ಈ ಬಾರಿ ಖಚಿತ ನಿರ್ಧಾರಕ್ಕೆ ಬರದಿದ್ದರೆ ನಮಗೆ ಪಕ್ಷವೇ ಬೇಡ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಪ್ರಯತ್ನ ಫಲ ನೀಡದಿದ್ದಾಗ ಸಭೆಯಿಂದ ಎದ್ದು ಹೊರ ನಡೆದರು.

ಬಳಿಕ ತೋಟದ ಮನೆಯ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, ಕನಕಪುರದಲ್ಲಿ ಆದಷ್ಟು ಶೀಘ್ರದಲ್ಲಿ ಪಕ್ಷದ ಕಚೇರಿ ತೆರೆಯುವ ಭರವಸೆ ನೀಡಿದರು.

ಬಿಜೆಪಿ ಚುನಾವಣೆ ರಣಕಹಳೆ: 12ರಂದು ಬೆಳಗಾವಿಗೆ ಬರಲಿದ್ದಾರೆ ಘಟಾನುಘಟಿ ನಾಯಕರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button