Kannada NewsLatest

ಧ್ವೇಷ-ಅಸೂಯೆ-ಅಶಾಂತಿಗೆ ಸರ್ಕಾರ ಅವಕಾಶ ಕೊಡಬಾರದು; ಸಮಾನತೆ ಇದ್ದರೆ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ – ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮನುಷ್ಯ ಮನುಷ್ಯನ ನಡುವೆ ಧ್ವೇಷ, ಅಸೂಯೆ ಧರ್ಮವಲ್ಲ, ಪರಸ್ಪರ ಗೌರವ ಶ್ರೇಷ್ಠವಾದ ಧರ್ಮ. ಹಿಂಸೆ-ಧ್ವೇಷ-ಅಸಹಿಷ್ಣತೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿಯ ಹಿರೇಬಾಗೇವಾಡಿ ಸಮೀಪ ಅರಳಿಕಟ್ಟೆಯಲ್ಲಿ ನಡೆದ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಸ್ವಾಮೀಜಿ ನಿರಂಜನ ಪಟ್ಟಾಧಿಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದಾರಾಮಯ್ಯ, ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಇರುವುದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಸಮಾನತೆ ಇದೆ. ಸಮಾಜದಲ್ಲಿನ ಇಂಥಹ ಪಿಡುಗು ಹೋಗಲಾಡಿಸಲು ಬಸವಾದಿ ಶರಣರು ಯತ್ನಿಸಿದ್ದಾರೆ. ಸಮಾಜ ಸುಧಾರಕರೆಲ್ಲರೂ ಮನುಷ್ಯ ಮನುಷ್ಯರಾಗಿ ಬದುಕಬೇಕು ಎಂದರು.

ಯಾವುದೇ ಧರ್ಮದ ವೈಭವೀಕರಣವಾಗಬಾರದು. ಮನುಷ್ಯ ಮನುಷ್ಯನ ನಡುವೆ ಕಂದಕವಿರಬಾರದು. ಪರಸ್ಪರ ಧ್ವೆಷ ಸಾಧನೆ ಧರ್ಮವಲ್ಲ. ಪರಸ್ಪರ ಪ್ರೀತಿ, ಗೌರವವೇ ಶ್ರೇಷ್ಠ ಧರ್ಮ. ಅದಕ್ಕೆ ದಯೆಯೇ ಧರ್ಮದ ಮೂಲವಯ್ಯ ಎಂದು ಶರಣರು ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದರು.

ಜಾತಿ, ಅಸಮಾನತೆ, ಧ್ವೇಷ ಹೋಗದೇ ನಾಡು-ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಶಾಂತಿ, ನೆಮ್ಮದಿ ಇರಲೂ ಸಾಧ್ಯವಿಲ್ಲ. ಸಂವಿಧಾನ ಉಳಿದರೆ ಎಲ್ಲರೂ ಉಳಿಯುತ್ತಾರೆ. ಇಲ್ಲವಾದಲ್ಲಿ ಶ್ರೇಣಿಕೃತ ವ್ಯವಸ್ಥೆ ಮತ್ತೆ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ವೇಳೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಉಪಸ್ಥಿತರಿದ್ದರು.

ಯತ್ನಾಳ್ ಹೇಳಿಕೆ ಸಮಗ್ರ ತನಿಖೆಯಾಗಲಿ – ಸಿದ್ದರಾಮಯ್ಯ ಆಗ್ರಹ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button