Kannada NewsLatest

ಬ್ರಾಹ್ಮಣ ಸಮುದಾಯದ ಕೌಟುಂಬಿಕ ಭಿನ್ನಾಭಿಪ್ರಾಯಗಳ ಇತ್ಯರ್ಥಕ್ಕೆ ಕೌನ್ಸಿಲಿಂಗ್ ಕೇಂದ್ರ – ಅಶೋಕ ಹಾರ್ನಳ್ಳಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಎರಡನೇ ರಾಜಧಾನಿ ಎಂದೇ ಗುರುತಿಸಲ್ಪಡುವ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

ನಗರದಲ್ಲಿಂದು ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ನಾ.ಸು ಹರ್ಡಿಕರ, ಗಂಗಾಧರರಾವ್ ದೇಶಪಾಂಡೆ ಸೇರಿದಂತೆ ಇಲ್ಲಿಯ ಬ್ರಾಹ್ಮಣ ಸಮಾಜದ ಮುಖಂಡರು ಸ್ವಾತಂತ್ರ ಹೋರಾಟದ ದಿನಗಳಿಂದಲೂ ಮಂಚೂಣಿಯಲ್ಲಿದ್ದರು. ಅಂತಹ ಮಹನೀಯರನ್ನು ಗಮನದಲ್ಲಿಟ್ಟುಕೊಂಡು  ನಾವು ಸಂಘಟನೆಯತ್ತ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಅವರು ಹೇಳಿದರು.

ನಿರುಪದ್ರವಿಯಾಗಿರುವ ವಿಪ್ರರು ಸ್ವಸಾಮರ್ಥ್ಯದಿಂದ ಅಭಿವೃದ್ಧಿ ಹೊಂದುವ ಕ್ಷಮತೆ ಹೊಂದಿದ್ದಾರೆ.  ಇಡೀ ವಿಶ್ವದಾದ್ಯಂತ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬ್ರಾಹ್ಮಣರು ಮಂಚೂಣಿಯಲ್ಲಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಬ್ರಾಹ್ಮಣ ಸಮುದಾಯದವರ ಸಮಸ್ಯೆಗಳಿಗೆ ಮಹಾಸಭಾದಿಂದ ಸ್ಪಂದಿಸುವ ಪ್ರಯತ್ನ ನಡೆದಿದೆ. ಜೊತೆಗೆ ಬ್ರಾಹ್ಮಣ ಸಮುದಾಯದ ಕೌಟುಂಬಿಕ ಭಿನ್ನಾಭಿಪ್ರಾಯಗಳ ಕುರಿತಾದ ವ್ಯಾಜ್ಯಗಳ ಇತ್ಯರ್ಥಕ್ಕೆ ಕೌನ್ಸಿಲಿಂಗ್ ಕೇಂದ್ರವನ್ನು ಆರಂಭಿಸುವ ಚಿಂತನೆಯನ್ನು ಮಾಡಲಾಗುತ್ತಿದೆ ಎಂದರು.

ಮುಖ್ಯವಾಗಿ ಸಮುದಾಯದ ಅವಿವಾಹಿತ ಯುವಕರ ಮದುವೆಯ ಸಮಸ್ಯೆಗೆ ಪರಿಹಾರ ಒದಗಿಸುವ ಕುರಿತಂತೆ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಉದ್ದಿಮೆದಾರರ ಸಭೆಯ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಶೋಕ ಹಾರನಹಳ್ಳಿ, ರಾಮ ಬಂಢಾರಿ, ಭರತ ದೇಶಪಾಂಡೆ, ವಿಲಾಸ ಬದಾಮಿ ಸೇರಿದಂತೆ ಇನ್ನೂ ಕೆಲವರ ಸಹಕಾರದಿಂದ ಸಂಘಟನೆಯನ್ನು ಯಾವ ರೀತಿ  ಬಲಪಡಿಸಬೇಕು ಎನ್ನುವುದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಉದ್ದಿಮೆದಾರರ ವೇದಿಕೆಗೆ ಚಾಲನೆ ನೀಡುತ್ತಿರುವುದಾಗಿಯೂ ಅವರು ಪ್ರಕಟಿಸಿದರು.

ಉದ್ಯಮಿ ಹಾಗು ಎಕೆಬಿಎಂಎಸ್‌ನ ಜಿಲ್ಲೆಯ ಮುಖ್ಯ ಸಂಯೋಜಕ ರಾಮ ಭಂಡಾರಿ ಮಾತನಾಡಿ, ಬೆಳಗಾವಿಯ ಇತಿಹಾಸದಲ್ಲೇ ಮೊದಲ ಸಲ ಬ್ರಾಹ್ಮಣ ಮಹಾಸಭಾ ವತಿಯಿಂದ ಸ್ಥಳೀಯ ಉದ್ದಿಮೆದಾರರನ್ನು ಸಂಘಟಿಸುವ ಪ್ರಯತ್ನ ನಡೆದಿದ್ದು ಉತ್ತಮ ಕೆಲಸ. ಮುಂಬರುವ ದಿನಗಳಲ್ಲಿ ಉದ್ದಿಮೆದಾರರೆಲ್ಲರೂ ಸೇರಿ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಮತ್ತು ಇತರೆ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದರು.

ಉದ್ಯಮಿ ಭರತ ದೇಶಪಾಂಡೆ ಮಾತನಾಡಿ. ಕಳೆದ ಹಲವು ವರ್ಷಗಳಿಂದ ಸಂಘಟನೆ ಇರಲಿಲ್ಲ. ಈಗ ಎಲ್ಲರನ್ನೂಒಗ್ಗೂಡಿಸುವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಎಕೆಬಿಎಂಎಸ್ ಘಟಕ ಉತ್ತಮ ಕೆಲಸ ಮಾಡುತ್ತಿದೆ. ಇನ್ನು ಮುಂದೆ ಕೂಡ ನಾವು ಸಂಘಟನೆ ದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಕಟಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸೇರಿದಂತೆ ವಿವಿಧ ತಾಲುಕು ಮತ್ತು ಬೇರೆ ಬೇರೆ ಘಟಕಗಳಿಂದ ಅಶೋಕ ಹಾರನಹಳ್ಳಿ ಅವರನ್ನು ಸತ್ಕರಿಸಲಾಯಿತು.

ಜಿಲ್ಲಾ ಬ್ರಾಹ್ಮಣ ಘಟಕದ ಅಧ್ಯಕ್ಷ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಸಂಘಟನೆ ಬಗ್ಗೆ ಮಾತನಾಡಿದರು. ಎಕೆಬಿಎಂಎಸ್ ಉಪಾಧ್ಯಕ್ಷ ಆರ್.ಎಸ್. ಮುತಾಲಿಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿರಣ್ಣಯ್ಯ ಸ್ವಾಮಿ, ವಿಲಾಸ ಜೋಶಿ, ಪ್ರಿಯಾ ಪುರಾಣಿಕ, ಎನ್.ಎನ್. ವಿಶ್ವನಾಥ ಸೇರಿದಂತೆ ಬ್ರಾಹ್ಮಣ ಮಹಾಸಭಾ ಮುಖಂಡರು, ಕಾರ್ಯಕರ್ತರು, ಜಿಲ್ಲಾ ಹಾಗೂ ತಾಲೂಕು ಘಟಕಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.  ಶಿಲ್ಪಾ ಕುಲಕರ್ಣಿ ಮತ್ತು ಸುಬ್ರಹ್ಮಣ ಭಟ್ ಕಾರ್ಯಕ್ರಮ ನಿರೂಪಿಸಿದರು.  ಉದ್ಯಮಿ ವಿಲಾಸ ಬದಾಮಿ ವಂದಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಲ ಬೆಳಗಾವಿಗೆ ಆಗಮಿಸಿದ ಅಶೋಕ ಹಾರನಹಳ್ಳಿ ಅವರಿಗೆ ಶೋಭಾ ಯಾತ್ರೆಯ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.

ಆರ್‌ಪಿಡಿ ಕಾಲೇಜಿನ ಬಳಿಯಿರುವ ಕೃಷ್ಣಮಠದಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ಜಾಂಜ್ ಪಥಕ, ಮಹಿಳಾ ಮಂಡಳಗಳ ಕೋಲಾಟ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಬ್ರಾಹ್ಮಣ ಸಮುದಾಯಕ್ಕೆ ಜೈವಾಗಲಿ ಎನ್ನುವ ಘೋಷಣೆಗಳು ಕಿವಿಗಡಚಿಕ್ಕುವಂತೆ ಕೇಳಿ ಬಂದವು.

ಶ್ರೀಷಾ ಶೆಟ್ಟಿ ಮತ್ತು ಶಿವಾನಿ ಜಮಖಂಡಿ ಅವರ ಭರತ ನಾಟ್ಯ ಪ್ರೇಕ್ಷಕರ ಮನಸೂರೆಗೊಂಡಿತು. ವೇಣುಗೋಪಾಲ ಭಜನಾ ಮಂಡಳಿಯಿಂದ ಗಣೇಶ ಸ್ತುತಿ, ಶಾಂಭವಿ ಭಜನಾ ಮಂಡಳಿಯಿಂದ ಹರಿ ಸ್ತುತಿ ಮತ್ತು ಪುರಂದರದಾಸದ ಭಕ್ತಿಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.

ಮೇ 8 ರಂದು ಅಶೋಕ ಹಾರನಹಳ್ಳಿ ಅಭಿನಂದನಾ ಸಮಾರಂಭ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button