Kannada NewsKarnataka News

ಅಂಕಲಿಯಲ್ಲಿ ಮಂಗಳವಾರ ಐತಿಹಾಸಿಕ ಕಾರ್ಯಕ್ರಮ: ಮರಾಠಿ ನಾಯಕ ಶರದ್ ಪವಾರ್ ಅವರಿಂದ ಕನ್ನಡಿಗರ ಹೃದಯ ಸಾಮ್ರಾಜ್ಞೆ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ; ಡಾ.ಪ್ರಭಾಕರ ಕೋರೆಯಿಂದ ಅಪೂರ್ವ ಸಾಧನೆ

ಎಂ.ಕೆ.ಹೆಗಡೆ, ಚಿಕ್ಕೋಡಿ – ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ  ಬೆಳಗಾವಿ ಜಿಲ್ಲೆಯ ಅಂಕಲಿ ಮಂಗಳವಾರ ಸಾಕ್ಷಿಯಾಗಲಿದೆ.

ಮರಾಠಿ ನೆಲದ ನಾಯಕರೊಬ್ಬರು ಕನ್ನಡಿಗರ ಹೃದಯ ಸಾಮ್ರಾಜ್ಞೆಯ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಹಲವು ದಶಕಗಳ ಹಿಂದೆ ಬೆಳಗಾವಿ – ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಹೋರಾಟ ನಡೆಸಿದ್ದ ಮರಾಠಿ ನೆಲದ ನಾಯಕ, ರಾಷ್ಟ್ರವಾದಿ ಕಾಂಗ್ರೆಸ್ ಮುಖಂಡ ಶರದ್ ಪವಾರ ಕನ್ನಡಿಗರ ಹೃದಯ ಸಾಮ್ರಾಜ್ಞೆ ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮನ ಕಂಚಿನ ಪುತ್ಥಳಿಯನ್ನು ಮಂಗಳವಾರ ಲೋಕಾರ್ಪಣೆ ಮಾಡಲಿದ್ದಾರೆ.

ಅಂಕಲಿ ಗ್ರಾಮ ರಾಜ್ಯ ಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ಅವರ ತವರು. ಪ್ರಭಾಕರ ಕೋರೆಯವರೇ ಕಿತ್ತೂರು ರಾಣಿ ಚನ್ನಮ್ಮನ ಅಶ್ವಾರೂಢ ಕಂಚಿನ ಪುತ್ಥಳಿಯ ಸ್ಥಾಪನೆಯ ರೂವಾರಿ.

ಪ್ರಭಾಕರ ಕೋರೆ ಮತ್ತು ಶರದ್ ಪವಾರ ಅವರ ಸ್ನೇಹ ಹಲವು ದಶಕಗಳದ್ದು. ಅವರಿಬ್ಬರ ಸಂಬಂಧ ಅದೆಷ್ಟು ಗಾಢವಾದದ್ದೆಂದರೆ  ಶರದ್ ಪವಾರ ಅವರ ಮನೆಯ  ಮಾದರಿಯಲ್ಲೇ ಪ್ರಭಾಕರ ಕೋರೆ ಬೆಳಗಾವಿಯಲ್ಲಿ ಮನೆ ಕಟ್ಟಿಸಿದ್ದಾರೆ. ಹಲವು ದಶಕಗಳಿಂದಲೂ ಅವರ ಸಂಬಂಧ ಹಾಗೆಯೇ ಉಳಿದುಕೊಂಡಿದೆ.

ಈ ಸಂಬಂಧವನ್ನೇ ಬಳಸಿಕೊಂಡು ಪ್ರಭಾಕರ ಕೋರೆ ಇದೀಗ ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ಮುಂದಾಗಿದ್ದಾರೆ.

ಶರದ್ ಪವಾರ ಹಿಂದೆ ಬೆಳಗಾವಿ ನೆಲವನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಬೇಕೆನ್ನುವ ಹೋರಾಟದಲ್ಲಿ ಭಾಗಿಯಾಗಿದ್ದವರು. 1986ರಲ್ಲಿ ಸೀಮಾ ಲಡಾಯಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ದಿನ ಅಂದಿನ ಎಸ್ಪಿ ಕೆ.ನಾರಾಯಣ ಶರದ್ ಪವಾರ್ ಅವರನ್ನು ಅಕ್ಷರಶಃ ಎಳೆದುಕೊಂಡು ಹೋಗಿ ಕಾರಲ್ಲಿ ಕೂಡ್ರಿಸಿಕೊಂಡು ಕೊಲ್ಲಾಪುರ ಗಡಿಗೆ ಬಿಟ್ಟು ಗಡಿಪಾರು ಮಾಡಿ ಬಂದಿದ್ದರು. ಅದೇ ಅವರ ಕೊನೆಯ ಗಡಿ ಹೋರಾಟ.

ನಂತರದಲ್ಲಿ ವಾಸ್ತವ ಅರಿವಾಗಿ ಅವರು ಹೋರಾಟದಿಂದ ಹಿಂದೆ ಸರಿದಿದ್ದರು. ಆದಾಗ್ಯೂ ಬೆಳಗಾವಿ ಮರಾಠಿ ಭಾಷಿಯಕರಿಗೆ ಶರದ್ ಪವಾರ್ ಮೇಲಿನ ಅಭಿಮಾನ, ನಿಷ್ಠೆ ಇಂದಿಗೂ ಕಡಿಮೆಯಾಗಿಲ್ಲ. ತಮ್ಮ ಹೋರಾಟ ಕುರಿತು ಶರದ್ ಪವಾರ್ ಜೊತೆ ಆಗಾಗ ಎಂಇಎಸ್ ನಾಯಕರು ಚರ್ಚಿಸುತ್ತಾರೆ. ಒಂದು ತಿಂಗಳ ಹಿಂದೆ ಸಹ ಕೆಲವು ಎಂಇಎಸ್ ನಾಯಕರು ಹೋಗಿ, ಸುಪ್ರಿಂ ಕೋರ್ಟ್ ನಲ್ಲಿರುವ ಗಡಿವ ವಿವಾದ ಬೇಗ ಇತ್ಯರ್ಥವಾಗುವಂತೆ ನೋಡಿಕೊಳ್ಳುವಂತೆ ಶರದ್ ಪವಾರ್ ಅವರಲ್ಲಿ ಮನವಿ ಮಾಡಿದ್ದರು. ಆಯ್ತು ಮಾಡೋಣ ಎಂದು ಹೇಳಿ ಕಳಿಸಿದ್ದರು.

ಅನೇಕ ಬಾರಿ ಮರಾಠಿ ಸಾಹಿತ್ಯ ಸಮ್ಮೇಳನ ನೆಪದಲ್ಲಿ, ಬೇರೆ ಬೇರ್ ಕಾರ್ಯಕ್ರಮಗಳ ನೆಪದಲ್ಲಿ ಅವರನ್ನು ಕರೆಸಿದ್ದರು. ಆದರೆ ಎಂದೂ ಅವರು ಗಡಿ ವಾಚರ ಎತ್ತಿದ್ದಿಲ್ಲ.

ಮರಾಠಿ ಭಾಷಿಕರು ಛತ್ರಪತಿ ಶಿವಾಜಿಯನ್ನು ತಮ್ಮ ಆರಾಧ್ಯ ದೈವ ಎನ್ನುವಂತೆ ಬಿಂಬಿಸಿದರೆ, ಕನ್ನಡಿಗರು ಕಿತ್ತೂರು ರಾಣಿ ಚನ್ನಮ್ಮನನ್ನು ತಮ್ಮ ಹೃದಯ ಸಾಮ್ರಾಜ್ಞೆ ಎಂದು ಆರೀಧಿಸುತ್ತಾರೆ. ಕನ್ನಡ – ಮರಾಠಿ ಅಥವಾ ಭಾಷೆ ಮತ್ತು ಗಡಿ ವಿವಾದದಲ್ಲಿ ಕನ್ನಡಿಗರು ಕಿತ್ತೂರು ಚನ್ನಮ್ಮನ ಹೆಸರಿನಲ್ಲಿ ಘೋಷಣೆ ಕೂಗಿದರೆ, ಮರಾಠಿಗರು ಶಿವಾಜಿ ಹೆಸರಲ್ಲಿ ಘೋಷಣೆ ಕೂಗುವುದು ನಡೆದುಕೊಂಡು ಬಂದಿರುವ ಪದ್ಧತಿ. ಹಾಗಾಗಿ ಶಿವಾಜಿ ಮರಾಠಿಗರ ನಾಯಕ, ಚನ್ನಮ್ಮ ಕನ್ನಡಿಗರ ನಾಯಕಿ ಎಂದೇ ಬಿಂಬಿಸಲಾಗುತ್ತದೆ. (ಕನ್ನಡಿಗರು ಶಿವಾಜಿಯನ್ನು ಎಂದೂ ಕೀಳಾಗಿ ಕಂಡಿಲ್ಲ,, ಶಿವಾಜಿಗೆ ಸಲ್ಲಬೇಕಾದ ಗೌರವವನ್ನು ಕೊಡುತ್ತಲೇ ಬಂದಿದ್ದಾರೆ ಎನ್ನುವುದು ವಾಸ್ತವ).

ಇದೀಗ,  ಮಹಾರಾಷ್ಟ್ರ ನಾಯಕ ಶರದ್ ಪವಾರ್ ಮಂಗಳವಾರ ಕನ್ನಡಿಗರ ಆದರ್ಶ ಕಿತ್ತೂರು ಚನ್ನಮ್ಮನ ಪುತ್ಥಳಿಯನ್ನು ಲೋಕಾರ್ಪಣೆ ಮಾಡುತ್ತಿರುವುದು ಐತಿಹಾಸಿಕ ಘಟನೆಯೇ ಆಗಲಿದೆ.

ವಿವಿಧ ಕಾರ್ಯಕ್ರಮ

ಅಂಕಲಿಯಲ್ಲಿ ಮಂಗಳವಾರ ವಿವಿಧ ಕಾರ್ಯಕ್ರಮಗಳಲ್ಲಿ ಶರದ್ ಪವಾರ್ ಭಾಗವಹಿಸಲಿದ್ದಾರೆ.

ಡಾ. ಪ್ರಭಾಕರ ಕೋರೆ ಸೌಹಾರ್ಧ ಸಹಕಾರಿ ಲಿ, ಅಂಕಲಿ ಇದರ ಪ್ರಧಾನ ಕಚೇರಿಯ ಮೂರು ಅಂತಸ್ತಿನ ಕಟ್ಟಡವನ್ನು ಸಹ ಶರದ್ ಪವಾರ್ ಉದ್ಘಾಟಿಸಲಿದ್ದಾರೆ.  ಸಮಾರಂಭ ಅಂದು ಸಂಜೆ 4..30ಕ್ಕೆ ಅಂಕಲಿಯ ಶ್ರೀಮತಿ ಶಾರದಾದೇವಿ ಕೋರೆ ಪ್ರೌಢಶಾಲೆಯ ಆವರಣದಲ್ಲಿ ನಡೆಯಲಿದೆ.  ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ.

ರಾಜ್ಯ ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಸೌಹಾರ್ಧ ಸಹಕಾರಿಯ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಆಹಾರ, ನಾಗರೀಕ ಪೂರೈಕೆ ಹಾಗೂ ಅರಣ್ಯ ಖಾತೆ ಸಚಿವ ಉಮೇಶ ಕತ್ತಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಲೋಕಸಭಾ ಸದಸ್ಯ ಅಣ್ಣಾ ಸಾಹೇಬ್ ಜೊಲ್ಲೆ, ಶಾಸಕರಾದ ಧುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಪ್ರಮುಖರಾದ ಬಿ. ಎಚ್. ಕೃಷ್ಣಾ ರೆಡ್ಡಿ, ಜಗದೀಶ ಕವಟಗಿಮಠ, ಶೈಲಜಾ ಪಾಟೀಲ ಮೊದಲಾದವರು ಉಪಸ್ಥಿತರಿರುತ್ತಾರೆ.

ನಂತರ ಅಂಕಲಿ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚನ್ನಮ್ಮನ ಅಶ್ವಾರೂಢ ಕಂಚಿನ ಪುತ್ಥಳಿಯನ್ನು ಶರದ್ ಪವಾರ್ ಅನಾವರಣಗೊಳಿಸುವರು.

ಅದೇ ಶರದ್ ಪವಾರ ಬೆಳಗಾವಿಯಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿ ಸೇರಿ 5 ಜಿಲ್ಲೆಗಳಲ್ಲಿ ಮೆಗಾ ಹಾಸ್ಟೇಲ್ ನಿರ್ಮಾಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button