ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಲ ಮಕ್ಕಳಲ್ಲಿ ರಕ್ತ ಉತ್ಪಾದನೆಯಾಗುವುದಿಲ್ಲ ಅಂತಹ ಮಕ್ಕಳಿಗೆ ನಿರಂತರವಾಗಿ ಹೊರಗಿನಿಂದ ರಕ್ತ ಹಾಕಬೇಕಾಗುತ್ತದೆ. ಹಾಗಾಗಿ ಮಕ್ಕಳ ಆರೋಗ್ಯ ಕಾಪಾಡಲು ರಕ್ತ ಅತ್ಯವಶ್ಯವಾಗಿ ಬೇಕಾಗುತ್ತದೆ. ಅಲ್ಲದೇ ಅಪಘಾತವಾದಾಗ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ರಕ್ತ ಅತ್ಯವಶ್ಯಕ. ಆದ್ದರಿಂದ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಸಹಕರಿಸುವಂತೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಮನವಿ ಮಾಡಿದರು.
ವಿಶ್ವ ಥಲಸ್ಸೆಮಿಯಾ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಸಂಸ್ಥೆ ಹಾಗೂ ಥಲಸ್ಸೇಮಿಯಾ ಕೇರ್ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಥಲಸ್ಸೇಮಿಯಾ ಡೇ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡುವದು ಬಹಳ ಮುಖ್ಯ. ರಕ್ತವು ಯಾವುದೇ ಮೂಲದಿಂದ ಲಭಿಸುವುದಿಲ್ಲ. ಬ್ಲಡ ಸಿಗುವದು ಅಪರೂಪ. ಅದನ್ನು ಜನರು ಮಾಡುವ ದಾನದಿಂದಲೇ ಸಂಗ್ರಹಿಸಬೇಕಾಗುತ್ತದೆ. ಗೆಳೆಯರಿಗೂ ತಿಳಿಸಿ. ಆದ್ದರಿಂದ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಸಲಹೆ ನೀಡಿದ ಅವರು, ರೆಡ್‌ಕ್ರಾಸ ಸಂಸ್ಥೆಯೊಂದಿಗೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಒಡಂಬಡಿಕೆ ಮಾಡಿಕೊಂಡಿದೆ ಎಂದರು.
ಚಿಕ್ಕ ಮಕ್ಕಳ ತಜ್ಞವೈದ್ಯರಾದ ಡಾ. ಸುಜಾತಾ ಜಾಲಿ ಅವರು ಮಾತನಾಡಿ, ಆಸ್ಪತ್ರೆಯಲ್ಲಿ ಥಲಸ್ಸೆಮಿಯಾ ಪೀಡಿತ ಸುಮಾರು 240 ಮಕ್ಕಳಿದ್ದು, ಅವರಿಗೆ ಉಚಿತ ಚಿಕಿತ್ಸೆ ಹಾಗೂ ಬೋನ್ ಮ್ಯಾರೋ ಮಾಡಲಾಗುತ್ತಿದೆ. ಪ್ರತಿದಿನ 22 ಬಾಟಲ್ ರಕ್ತವನ್ನು ಕೇವಲ ಥಲಸ್ಸೆಮಿಯಾ ಮಕ್ಕಳಿಗೆ ನೀಡಲಾಗುತ್ತಿದೆ. ಸಂಕಲ್ಪ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ರಕ್ತ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಅಶೋಕ ಬದಾಮಿ ಅವರು ಮಾತನಾಡಿ, ಸಮಾಜಕ್ಕೆ ಏನಾದರೂ ನೀಡಿ, ನಿಮ್ಮನ್ನು ನೋಡಿ ಮತ್ತೆ ನಾಲ್ವರು ದಾನ ಮಾಡುತ್ತಾರೆ. ಅದರಲ್ಲಿಯೂ ರಕ್ತ ಅತೀ ಮುಖ್ಯವಾಗಿದ್ದು, ಅದರ ದಾನ ಜೀವ ಉಳಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಡ್ ಬ್ಯಾಂಕನ ಮುಖ್ಯಸ್ಥರಾದ ಎಸ್ ವಿ ವಿರಗಿ, ಡಾ. ರಾಜೇಶ ಪವಾರ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ ಹಾಗೂ ಯುಥ ರೆಡ್ ಕ್ರಾಸ್ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಅಥಿತಿ ಗೃಹ, ಪ್ರಯೋಗಾಲಯ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ