ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲ್ಲೂಕಿನ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾವರಗಟ್ಟಿ ಗ್ರಾಮದ ಬಳಿ ಗೋಡಂಬಿ ಬೀಜಗಳನ್ನು ಕಿತ್ತು ಸಂಗ್ರಹಿಸಲು ಹೊಲಕ್ಕೆ ತೆರಳಿದ್ದ ಬಾಲಕನ ಮೇಲೆ ಕರಡಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.
ಗೋಲಿಹಳ್ಳಿ ಅರಣ್ಯ ವಲಯಕ್ಕೆ ಸೇರಿದ ತಾವರಗಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ
ನಡೆದಿದ್ದು, ಗಾಯಗೊಂಡ ಬಾಲಕನನ್ನು ಅದೇ ಗ್ರಾಮದ ಗಣೇಶ ಪರಶುರಾಮ ಪಾಟೀಲ (17) ಎಂದು ಗುರುತಿಸಲಾಗಿದೆ. ಗ್ರಾಮದಿಂದ ಮೂರು ಕಿಮೀ ದೂರದಲ್ಲಿರುವ ತನ್ನ ಹೊಲಕ್ಕೆ ಗೋಡಂಬಿ ಬೀಜ ಸಂಗ್ರಹಿಸಲು ತೆರಳಿದ್ದ ಗಣೇಶ ಗಿಡದಿಂದ ಕೆಳಗೆ ಬಿದ್ದಿದ್ದ ಬೀಜಗಳನ್ನು ಸಂಗ್ರಹಿಸುವಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಆತನ ಮೇಲೆ ಕರಡಿ ಹಿಂದಿನಿಂದ ದಾಳಿ ನಡೆಸಿದೆ.
ಹಿಂದಿನಿಂದ ಗಣೇಶ್ ಭುಜಗಳನ್ನು ಹಿಡಿದು ಆಕ್ರಮಣ ನಡೆಸಿದ ಕರಡಿ ಆತನ ಮುಖ, ತಲೆಯ ಭಾಗವನ್ನು ಪರಚಿ ಗಾಯಗೊಳಿಸಿದೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ತೀವ್ರವಾಗಿ ಗಾಯಗೊಂಡು ಚೀರಾಟ ನಡೆಸಿದ ಗಣೇಶನ ಆಕ್ರಂದನ ಕೇಳಿದ ಅಕ್ಕಪಕ್ಕದ ಹೊಲಗಳಲ್ಲಿದ್ದವರು ಘಟನಾ ಸ್ಥಳಕ್ಕೆ ಧಾವಿಸಿ ಆತನನ್ನು ಕರಡಿಯಿಂದ ರಕ್ಷಿಸಿದ್ದಾರೆ. ತನ್ನತ್ತ ಧಾವಿಸುತ್ತಿದ್ದ ಜನಸಮೂಹವನ್ನು ಗಮನಿಸಿದ ಕರಡಿ ಗಣೇಶನನ್ನು ಬಿಟ್ಟು ಓಡಿದೆ ಎಂದು ಮೂಲಗಳು ತಿಳಿಸಿವೆ.
ಗಂಭೀರವಾಗಿ ಗಾಯಗೊಂಡಿದ್ದ ಗಣೇಶನನ್ನು ಸ್ಥಳೀಯರು ಘಟನಾ ಸ್ಥಳದಿಂದ ತಾವರಗಟ್ಟಿ
ಗ್ರಾಮಕ್ಕೆ ಕರೆತಂದು ಸ್ಥಳೀಯ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಸುದ್ದಿಯನ್ನು ಅರಣ್ಯ ಇಲಾಖೆಗೆ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಧಾವಿಸಿದ ಆರ್.ಎಫ್.ಒ ರತ್ನಾಕರ ಓಬಣ್ಣವರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಆತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ
ಸಾಗಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಗಣೇಶನಿಗೆ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದು, ಗಣೇಶ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವನ್ನು ಭೇಟಿ ಮಾಡಿದ ಅರಣ್ಯ ಇಲಾಖೆಯ ಉಪ ಅರಣ್ಯ
ಸಂರಕ್ಷಣಾಧಿಕಾರಿ ಎಂ.ವಿ ಅಮರನಾಥ್, ಖಾನಾಪುರ ಎಸಿಎಫ್ ಸಿ.ಬಿ ಪಾಟೀಲ, ಕಾಂಗ್ರೆಸ್
ಮುಖಂಡ ಇರ್ಫಾನ್ ತಾಳಿಕೋಟಿ ಮತ್ತಿತರರು ಆತನ ಆರೋಗ್ಯ ವಿಚಾರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ