ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ದುರ್ಮರಣಕ್ಕೀಡಾಗಿದ್ದಾರೆ.
ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ತಾರಿಹಾಳ ಬೈಪಾಸ್ನಲ್ಲಿ ರಾತ್ರಿ 12 ಗಂಟೆ ಹೊತ್ತಿಗೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೊಲ್ಹಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಬಸ್, ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಲಾರಿ ಚಾಲಕ, ಕ್ಲೀನರ್ ಸೇರಿದಂತೆ ಮೂವರು ಹಾಗೂ ಖಾಸಗಿ ಬಸ್ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರು.
ಇದಕ್ಕೂ ಮುನ್ನ ಬಸ್ ಟ್ರ್ಯಾಕ್ಟರ್ ಗೂ ಡಿಕ್ಕಿ ಹೊಡೆದಿದೆ. ನಂತರ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ.
ನ್ಯಾಷನಲ್ ಟ್ರಾವೆಲ್ಸ್ ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜು, ಪ್ರಯಾಣಿಕರಾದ ಮೈಸೂರಿನ ಮೊಹಮ್ಮದ್ , ಚಿಕ್ಕೋಡಿಯ ಬಾಬುಸಾಬ್ ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ 25 ಕ್ಕೂ ಹೆಚ್ಚು ಗಾಯಾಳುಗಳನ್ನು ದಾಖಲಿಸಲಾಗಿದೆ.
ಅಪಘಾತದಿಂದ ನಜ್ಜುಗುಜ್ಜಾಗಿರುವ ಎರಡೂ ವಾಹನಗಳನ್ನು ಪೊಲೀಸರು ತೆರವುಗೊಳಿಸಿ, ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸ್ ಆಯುಕ್ತ ಲಾಬೂರಾವ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ