ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಬಸವಾದಿ ಶರಣರ ಆಶಯಗಳನ್ನೇ ಹೊತ್ತು ತಮ್ಮ ಜೀವನದುದ್ದಕ್ಕೂ ಸಮಾಜದ ಎಲ್ಲ ವರ್ಗದ ಜನರಲ್ಲಿ ಕಾಯಕ ಪ್ರಜ್ಞೆ ಬೆಳೆಸಿದ ಕೀರ್ತಿ ಅಥಣಿಯ ನಡೆದಾಡುವ ದೇವರೆಂದು ಜನರ ಪ್ರೀತಿಗೆ ಪಾತ್ರರಾದ ಮುರುಘೇoದ್ರ ಶಿವಯೋಗಿಗಳಿಗೆ ಸಲ್ಲುತ್ತದೆ. ಅಥಣಿ ಸುತ್ತಮುತ್ತಲಿನ ಭಾಗದ ಜನರ ಇಂದಿನ ಜೀವನ ವಿಧಾನವೇ ಅದಕ್ಕೆ ಸಾಕ್ಷಿಯಾಗಿದೆ” ಎಂದು ಬೆಳಗಾವಿಯ ಹಿರಿಯ ಜಾನಪದ ತಜ್ಞ ಡಾ. ಬಸವರಾಜ ಜಗಜಂಪಿ ಅಭಿಪ್ರಾಯ ಪಟ್ಟರು.
ಬೆಳಗಾವಿಯ ಕಾರಂಜಿಮಠದಲ್ಲಿ ಜರುಗಿದ ‘252ನೇ ಶಿವಾನುಭವ ನಿಮಿತ್ಯ ಅಥಣಿ ಮುರುಘೇoದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, “ಕಳೆದ ಶತಮಾನದಲ್ಲಿ ಅಥಣಿ ಸುತ್ತಮುತ್ತಲಿನ ಪ್ರದೇಶದ ಊರೂರು ಸುತ್ತಿ ಬಸವಾದಿ ಶರಣರ ಸಂದೇಶಗಳನ್ನು ಸಾರಿದರು. ಬಿಡಿಗಾಸಿಗೂ ಆಸೆ ಪಡದ ಅವರು ಭಕ್ತರು ನೀಡಿದ ಕಾಣಿಕೆಯನ್ನು ತಮ್ಮ ಬೆತ್ತದಿಂದ ದೂರ ಸರಿಸುತ್ತಿದ್ದರು. ತಮ್ಮ ಶಿವಯೋಗ ಸಾಧನೆಯ ಫಲವನ್ನು ರೈತರಿಗೆ, ಕಾರ್ಮಿಕರಿಗೆ, ನೊಂದ ದೀನ ದಲಿತರಿಗೆ ಧಾರೆ ಎರೆದರು. ಅಂದು ಅವರು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ ಪರಿಣಾಮವಾಗಿ ಇಂದು ಅಥಣಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದೆ.
ಬಸವಣ್ಣನವರ ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಎಂಬ ವಚನವನ್ನು ಅನುಷ್ಠಾನಕ್ಕೆ ತಂದು ಜನರಲ್ಲಿರುವ ಅಂಧ:ಶ್ರದ್ಧೆ, ಮೌಢ್ಯತೆಯನ್ನು ಹೋಗಲಾಡಿಸಲು ಶಿಕ್ಷಣದತ್ತ ಜನರನ್ನು ಕರೆತಂದರು. ಅದರೊಂದಿಗೆ ಕಾಯಕ-ದಾಸೋಹ ಪರಂಪರೆಯನ್ನು ಜನರಲ್ಲಿ ಬಿತ್ತಿ ಬೆಳೆದರು. ಹಾನಗಲ್ಲ ಕುಮಾರ ಶಿವಯೋಗಿಗಳು, ಹುಬ್ಬಳ್ಳಿಯ ಸಿದ್ಧಾರೂಢರು, ಗರಗದ ಮಡಿವಾಳಪ್ಪನವರು, ನಾಗಲಿಂಗ ಶಿವಯೋಗಿಗಳು ಮುಂತಾದವರ ಒಡನಾಡಿಯಾದ ಅಥಣಿ ಶಿವಯೋಗಿಗಳು ಯೋಗಿ ಜೀವನಕ್ಕೆ ಭಾಷ್ಯ ಬರೆದವರು. ಅಂಥ ಮಹಾನ್ ದಾರ್ಶನಿಕರು ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ ನೂರು ವರ್ಷಗಳಾಗಿರಬಹುದು. ಸ್ಥಾವರಕ್ಕಿಂತ ಜಂಗಮ ಪ್ರಜ್ಞೆಗೆ ಹೆಚ್ಚಿನ ಮಹತ್ವ ನೀಡಿರುವ ಅವರು ಅವರ ಅನುಯಾಯಿಗಳ ಹೃದಯಮಂದಿರದಲ್ಲಿ ಚಿರ ಸ್ಥಾಯಿಯಾಗಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ೨೫೦ ನೇ ಸ್ಥಾನ ಪಡೆದ
ಸಾಹಿತ್ಯಾ ಮಲ್ಲಿಕಾರ್ಜುನ ಆಲದಕಟ್ಟಿ, ಸರ್ವಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ವಿರೇಶ ಬಸಯ್ಯಾ ಹಿರೇಮಠ ಹಾಗೂ ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ, ಸಮಾಜ ಸೇವಕ ಸುರೇಶ ಯಾದವ ಅವರನ್ನು ಸತ್ಕರಿಸಲಾಯಿತು.
ಸತ್ಕಾರಕ್ಕೆ ಪ್ರತಿಯಾಗಿ ಸಾಹಿತ್ಯಾ ಆಲದಕಟ್ಟಿ ಅವರು ಮಾತನಾಡಿ , “ಇಂದಿನ ಯುವ ಪೀಳಿಗೆ ಅದರಲ್ಲೂ ಗ್ರಾಮೀಣ ಭಾಗದ ಯುವ ಜನತೆ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯು.ಪಿ.ಎಸ್.ಸಿ. ಹಾಗೂ ಕೆ.ಪಿ.ಎಸ್.ಸಿ.ಯತ್ತ ಹೆಚ್ಚಿನ ಗಮನ ಕೊಡಬೇಕು. ಪ್ರತಿಭೆ ಸಾಧಕರ ಸ್ವತ್ತು. ಇಂದಿನ ತಂತ್ರಜ್ಞಾನ ಬಳಸಿಕೊಂಡು ಪರೀಕ್ಷೆ ತಯಾರಿ ಮಾಡಿಕೊಳ್ಳಬಹುದು. ಕನ್ನಡ ಮಧ್ಯಮದಲ್ಲೂ ಪರೀಕ್ಷೆ ಬರೆಯಬಹುದಾಗಿದ್ದು ನಿರಂತರ ಅಧ್ಯಯನ ಹಾಗೂ ಸೂಕ್ತ ಮಾರ್ಗದರ್ಶನದೊಂದಿಗೆ ಪೋಷಕರ ಸಹಕಾರ ಸಿಕ್ಕರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, “ಇಂಗಳಗಾಂವದಿಂದ ಹೊರಟ ಆಧ್ಯಾತ್ಮಜ್ಯೋತಿ, ಲಿಂಗಪ್ರಸಾದಿ ಅಥಣಿ ಶಿವಯೋಗಿಗಳು ಶಿವಯೋಗದಿಂದ ಜನರ ಹಿತಕ್ಕಾಗಿ ಅನೇಕ ಪವಾಡಗಳನ್ನು ಮಾಡಿದವರು. ಜನರಲ್ಲಿ ಸಂಸ್ಕಾರ ಮೂಡಿಸಿ ಸತ್ಕಾರ್ಯ ಮಾಡಿಸಿದವರು. ಅವರು ದೃಷ್ಟಿಯಿಟ್ಟು ಹರಸಿದ ಅನೇಕ ಮನೆತನಗಳು ಈಗಲೂ ಅಥಣಿ ಭಾಗದಲ್ಲಿ ಕಾಣಸಿಗುತ್ತವೆ. ಅವರ ಅಂತ:ಪ್ರಜ್ಞೆ, ಅಂತಃಕರುಣೆ ನಮ್ಮೆಲ್ಲರ ಮೇಲಿರಲಿ” ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ” ಅಥಣಿ ಶಿವಯೋಗಿಗಳ ತನು ಶುದ್ಧ, ಮನ ಶುದ್ಧ ವಾಗಿ ವಿಭೂತಿಪುರು? ಆಗಿದ್ದರು. ಜಾತಿ,ವರ್ಣ,ವರ್ಗ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಲಿಂಗದೀಕ್ಷೆ ನೀಡಿದವರು. ಅವರು ನಡೆದಾಡಿದ ಸ್ಥಳಗಳೇ ಇಂದು ಪಾವನ ಕ್ಷೇತ್ರಗಳಾಗಿವೆ. ಅಂಥ ಪುಣ್ಯ ಪುರು?ರ ಲಿಂಗೈಕ್ಯ ಶತಮನೋತ್ಸವವನ್ನು ನಮ್ಮ ಮಠದಲ್ಲಿ ಆಚರಿಸುತ್ತಿರುವುದು ಹೆಚ್ಚು ಸಂತಸದ ತಂದಿದೆ. ಅವರು ನಡೆದ ಮಾರ್ಗವೇ ನಮಗೆ ಮಾದರಿಯಾಗಿದೆ” ಎಂದು ನುಡಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಶಿವಯೋಗಿ ದೇವರು ಉಪಸ್ಥಿತರಿದ್ದರು.
ಶ್ರೀಮಠದ ಮಾತೃ ಮಂಡಳಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿದರು. ವಕೀಲರಾದ ವಿ.ಕೆ.ಪಾಟೀಲ ವಂದಿಸಿದರು.
ಸಿದ್ದರಾಮಯ್ಯ ಜತೆ ಮಾತುಕತೆ: ಬೆಳಗಾವಿಯಲ್ಲಿ ಬಹಿರಂಗಪಡಿಸಿದ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ