Karnataka NewsLatest

ಮುಖ್ಯಮಂತ್ರಿ ನಿವಾಸದ ಎದುರು ಜೂ.27ರಂದು ಪಂಚಮಸಾಲಿ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಜೂನ್ 27 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಹಲವಾರು ಬಾರಿ ಹೋರಾಟ ಮಾಡಿದರೂ ಮುಖ್ಯಮಂತ್ರಿಗಳು ಭರವಸೆ ನೀಡಿ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ.  ನಮ್ಮ ನಾಯಕರನ್ನು ಕರೆಸಿ ಮಾತುಕತೆ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಉತ್ತರವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಮೇಲೆ ವಿಶ್ವಾಸ ಇದೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ನಂಬಿದ ಹಾಗೆ ನಿಮ್ಮ ಮೇಲೂ ವಿಶ್ವಾಸ ಇದೆ. ಅದನ್ನು ನೆನಪಿಸುವ ನಿಟ್ಟಿನಲ್ಲಿ ಸಿಎಂ ಶಿಗ್ಗಾವಿ ನಿವಾಸದ ಎದುರು ಬೆಳಗ್ಗೆ  9 ಗಂಟೆಯಿಂದ ಸಂಜೆ 6 ರವರೆಗೆ ಸುಮಾರು ಒಂದು ಲಕ್ಷ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸ್ವತಃ ಹಾವೇರಿ ಜಿಲ್ಲೆಯಲ್ಲಿ ಜಿಪಂ ವ್ಯಾಪ್ತಿಯಲ್ಲಿ ಸಂಚರಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಮಾಜದ ಬಾಂಧವರಲ್ಲಿ ಮನವಿ ಮಾಡುವೆ. ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದ ಮೇಲೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಯಾರ ಚಾಡಿ ಮಾತುಗಳನ್ನೂ ಕೇಳಬಾರದು. ನ್ಯಾಯ ಸಮ್ಮತವಾಗಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಹಿಂದುಳಿದ ಆಯೋಗ ಸಮೀಕ್ಷೆ ಮಾಡಿ ವರದಿ ನೀಡಿದ್ದರೆ ಪಂಚಮಸಾಲಿ ಸಮುದಾಯಕ್ಕೆ  2 ಎ ಮೀಸಲಾತಿ ಸಿಗುತ್ತಿತ್ತು. ಅವರು ಚುನಾವಣೆ, ಕೊರೊನಾ ಸೋಂಕಿ‌ನ ಭೀತಿಯಿಂದ ವಿಳಂಬ ಮಾಡಿದ್ದಾರೆ ಎಂದರು.
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ಎ.ಬಿ.ಪಾಟೀಲ, ವಿನಯ ಕುಲಕರ್ಣಿ,  ಎಂ.ಬಿ.ಜಿರಲಿ, ರೋಹಿಣಿ ಪಾಟೀಲ, ಅಡಿವೇಶ ಇಟಗಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button