ಎಂಎಲ್ ಸಿ ಚುನಾವಣೆ ವೇಳೆ ಶಾಸಕರಿಗೆ ತಲಾ 50 ಲಕ್ಷ ಹಂಚಿಕೆ; ಸ್ವಪಕ್ಷೀಯ ಶಾಸಕನಿಂದಲೇ ಜೆಡಿಎಸ್ ವಿರುದ್ಧ ಹೊಸ ಬಾಂಬ್
ಪ್ರಗತಿವಾಹಿನಿ ಸುದ್ದಿ; ಕೋಲಾರ: ರಾಜ್ಯಸಭಾ ಚುನಾವಣೆ ಬೆನ್ನಲ್ಲೇ ಜೆಡಿಎಸ್ ಶಾಸಕರು ಬಹಿರಂಗವಾಗಿಯೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದು, ಇದೀಗ ಕೋಲಾರ ಶಾಸಕ ಶ್ರೀನಿವಾಸ್ ಗೌಡ, ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಶಾಸಕರಿಗೆ 50 ಲಕ್ಷ ಹಣ ಹಂಚಲಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಶ್ರೀನಿವಾಸಗೌಡ,ಎಂಎಲ್ ಸಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನ ಪ್ರತಿಯೊಬ್ಬ ಶಾಸಕರಿಗೂ 50 ಲಕ್ಷ ನೀಡಲಾಗಿದೆ. ನನಗೂ ಹಣ ಕೊಡಲು ಬಂದರು. ಆದರೆ ನಾನು ನಿರಾಕರಿಸಿದೆ ಎಂದು ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಅಡ್ಡ ಮತದಾನ ಮಾಡಿದ್ದ ಕೆ.ಶ್ರೀನಿವಾಸ್ ಗೌಡ, ನಾನು ಕೈ ಜೊತೆ ಸೇರಿದ್ದೇನೆ ಹಾಗಾಗಿ ಕಾಂಗ್ರೆಸ್ ಗೆ ಮತಹಾಕಿದ್ದೇನೆ. ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ಕುಮಾರಸ್ವಾಮಿ ಸಿಟ್ಟಾದರೆ ಆಗಲಿ ಬಿಡಿ ಎಂದಿದ್ದರು. ವಿಧಾನ ಪರಿಷತ್ ಚುನಾವಣೆ ವೇಳೆ ಜೆಡಿಎಸ್ ನಿಂದ ಪ್ರತಿಯೊಬ್ಬ ಶಾಸಕರಿಗೂ ಹಣ ಹಂಚಲಾಗಿದೆ ಎಂದು ಹೇಳುವ ಮೂಲಕ ಸ್ವಪಕ್ಷದ ವಿರುದ್ಧವೇ ಗಂಭೀರ ಆರೊಪ ಮಾಡಿದ್ದಾರೆ.
ಬೆಳಿಗ್ಗೆಯಷ್ಟೇ ಜೆಡಿಎಸ್ ನ ಗುಬ್ಬಿ ಶ್ರೀನಿವಾಸ್, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರಲ್ಲದೇ, ಪಕ್ಷ ತೊರೆಯುತ್ತಿರುವ ಸುಳಿವು ನೀಡಿದ್ದರು. ಇದೀಗ ಕೋಲಾರ ಶಾಸಕರು ಪಕ್ಷದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಒಟ್ಟಾರೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ನ ಶಾಸಕರು ದಳಪತಿಗಳಿಗೆ ಕೈಕೊಟ್ಟು ಬೇರೆ ಪಕ್ಷದತ್ತ ಮುಖ ಮಾಡುತ್ತಿರುವುದು ಸುಳ್ಳಲ್ಲ.
ಅವನೇನು ಕತ್ತೆ ಕಾಯುತ್ತಿದ್ನಾ? HDK ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಜೆಡಿಎಸ್ ಶಾಸಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ