Latest

ಮುಂದಿನ ವರ್ಷದಿಂದ 2 ದಿನ ಬೆಳಗಾವಿ ಗ್ರಾಮೀಣ ಉತ್ಸವ -ಹೆಬ್ಬಾಳಕರ್

ಇನ್ನೊಮ್ಮೆ ಸೋತರೆ ನಾನೇನು ಮಾಡಿಕೊಳ್ಳುವೆ ಎಂದು ತಾಯಿಗೆ ಹೇಳಿದ್ದೆ -ಭಾವುಕರಾಗಿ ನುಡಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನನಗೆ ಜನ್ಮ ನೀಡಿ ತುತ್ತು ತಿನ್ನಿಸಿ ದೊಡ್ಡವಳನ್ನಾಗಿ ಮಾಡಿದ ನನ್ನ ತಾಯಿಯ ಋಣ ದೊಡ್ಡದು. ಆದರೆ ಪ್ರೀತಿ, ವಿಶ್ವಾಸದಿಂದ ಕಂಡು ನನ್ನನ್ನು ಗೆಲ್ಲಿಸಿ ನನಗೆ ಸ್ವಾಭಿಮಾನದ ಬದುಕು ನೀಡಿದ ಬೆಳಗಾವಿ ಗ್ರಾಮೀಣ ಜನರ ಋಣ ಅದಕ್ಕೂ ದೊಡ್ಡದು. ನಿಮ್ಮ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅತ್ಯಂತ ಭಾವುಕರಾಗಿ ನುಡಿದರು.
ನಗರದ ಕ್ಲಬ್ ರಸ್ತೆಯ ಬೆಳಗಾವಿ ಕ್ಲಬ್ ನಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಗ್ರಾಮೀಣ ಕ್ಷೇತ್ರದ ಜನತೆ ಹಾಗೂ ಅಭಿಮಾನಿಗಳೊಂದಿಗೆ ಅತಿ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಲಕ್ಷ್ಮಿ ಹೆಬ್ಬಾಳಕರ ಜನತೆಯನ್ನುದ್ದೇಶಿಸಿ ಮಾತನಾಡಿದರು.


ಎರಡು ಬಾರಿ ಚುನಾವಣೆಗಳಲ್ಲಿ ಸೋತು ಕಂಗೆಟ್ಟು ಹೋಗಿದ್ದೆ. ಇನ್ನೊಂದು ಚುನಾವಣೆಯಲ್ಲಿ ಸೋಲುವ ಶಕ್ತಿ ನನ್ನಲ್ಲಿ ಇರಲಿಲ್ಲ. ನಾನು ಹುಟ್ಟಿನಿಂದಲೇ ಧೈರ್ಯವಂತೆಯಾದರೂ ಬದುಕುವ ಶಕ್ತಿ ಇರಲಿಲ್ಲ. ಇನ್ನೊಮ್ಮೆ ಸೋತರೆ ನಾನೇನು ಮಾಡಿಕೊಳ್ಳುವೆ ಎಂದು ತಾಯಿಗೆ ಹೇಳಿದ್ದೆ. ಆದರೆ ಗ್ರಾಮೀಣ ಕ್ಷೇತ್ರದ ಜನತೆ ನನ್ನ ಕೈಬಿಡಲಿಲ್ಲ. ನನ್ನನ್ನು ಗೆಲ್ಲಿಸಿ ನನಗೆ ಮರುಜನ್ಮ ನೀಡಿದ್ದಾರೆ. ಸ್ವಾಭಿಮಾನದ ಮರುಜನ್ಮ ನೀಡಿದ ಅವರ ಉಪಕಾರ ಮರೆಯಲಾರೆ ಎಂದು ಅವರು ಹೇಳಿದರು.
ನನ್ನನ್ನು ನಿಮ್ಮ ಎಮ್ಮೆಲ್ಲೆ ಅಂತ ನೋಡಬೇಡಿ. ನಿಮ್ಮ ಅಕ್ಕ ತಂಗಿಯಾಗಿ, ಮನೆ ಮಗಳಾಗಿ, ತಾಯಿಯಾಗಿ ನೋಡಿ. ನಿಮ್ಮ ಪ್ರೀತಿ ವಿಶ್ವಾಸವನ್ನು ನನ್ನ ಹೃದಯದಲ್ಲಿ ಸದಾ ಜೋಪಾನವಾಗಿ ಇಟ್ಟುಕೊಳ್ಳುವೆ. ಈ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಆಸ್ತಿ. ಇವರಿಗೆ ಬೇಕಾದ ಎಲ್ಲ ರೀತಿಯ ನೆರವು ನೀಡುವ ವಾಗ್ದಾನ ಮಾಡುವೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಮ್ಮ ಹಾಗೂ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲಿ ಎಂದು ಹೆಬ್ಬಾಳಕರ ನುಡಿದರು.

ಗ್ರಾಮೀಣ ಉತ್ಸವ

ನನಗೆ ಮರುಹುಟ್ಟು ನೀಡಿದ ಈ ದಿನವನ್ನು ನನ್ನ ಜನ್ಮ ದಿನವನ್ನಾಗಿ ಪ್ರತಿವರ್ಷವೂ ಆಚರಿಸುತ್ತೇನೆ. ಬರುವ ವರ್ಷ ಮೇ 11 ಹಾಗೂ 12 ರಂದು ತಮ್ಮ ಹುಟ್ಟಿದ ಹಬ್ಬವನ್ನು ಇದಕ್ಕೂ ಅದ್ದೂರಿಯಾಗಿ ಆಚರಿಸಲಾಗುವುದು. ಎರಡು ದಿನಗಳ ಕಾಲ ಬೆಳಗಾವಿ ಗ್ರಾಮೀಣ ಉತ್ಸವವಾಗಿ ಆಚರಿಸಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳಕರ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಜನರ ಪ್ರೀತಿ ವಿಶ್ವಾಸ ಗಳಿಸಿ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳಕರ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ರಾಜ್ಯ ಹಾಗೂ ಇಡೀ ದೇಶಕ್ಕೆ ಅವರ ಸೇವೆ ಲಭಿಸುವಂತಾಗಲಿ ಎಂದು ಹಾರೈಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಮಾತನಾಡಿ, ತಾಯಿ ಗರ್ಭದಿಂದ ಹುಟ್ಟಿದ ದಿನದ ಬದಲಾಗಿ ಜನತೆ ಆಶೀರ್ವಾದ ಮಾಡಿದ ದಿನವನ್ನೇ ತನ್ನ ಹುಟ್ಟುಹಬ್ಬವಾಗಿ ಅಚರಿಸಿಕೊಳ್ಳುತ್ತಿರುವ ಏಕೈಕ ಮಹಿಳೆ ಲಕ್ಷ್ಮಿ ಹೆಬ್ಬಾಳಕರ ಆಗಿದ್ದಾರೆ. ಒಂದೇ ವರ್ಷದಲ್ಲಿ 750 ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ. 860 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅವರಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದರು.

ಕೂಡಲ ಸಂಗಮ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿ, ಇಂದಿನ ಜಗತ್ತಿನಲ್ಲಿ ಬಹುತೇಕ ರಾಜಕಾರಣಿಗಳು ತಮ್ಮ ಕ್ಷೇತ್ರದ ಜನತೆಯನ್ನು ದೂರವಿಟ್ಟೆ ಅಧಿಕಾರ ನಡೆಸುತ್ತಾರೆ. ಆದರೆ ಶಾಸಕಿ ಹೆಬ್ಬಾಳಕರ ಮಾತ್ರ ತನ್ನ ಕ್ಷೇತ್ರದ ಜನರೊಂದಿಗೆ ಬೆರೆತು, ಅವರೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಇನ್ನು ಮುಂದೆಯೂ ಕ್ಷೇತ್ರದ ಜನ ಅವರನ್ನು ಬೆಂಬಲಿಸಿ ಅವರು ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗುವಂತೆ ಮಾಡಲಿ ಎಂದರು.

ಮುತ್ನಾಳದ ಸ್ವಾಮೀಜಿ ಆಶಿರ್ವಚನ ನೀಡಿದರು. ಬಡೆಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ವಿ.ಎಸ್.ಸಾಧುನವರ್, ಸಿ.ಸಿ.ಪಾಟೀಲ, ಯುವರಾಜ ಕದಂ, ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್  ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು. ಬಸವರಾಜ ಮ್ಯಾಗೋಟಿ ಕಾರ್ಯಕ್ರಮ ನಿರೂಪಿಸಿದರು. 

ತಾಯಿ ಸ್ಮರಣೆ

ಇವತ್ತು ವಿಶ್ವ ತಾಯಂದಿರ ದಿನ ಸಹ ಆಗಿತ್ತು. ಭಾಷಣ ಆರಂಭಿಸುವ ಮುನ್ನ ವೇದಿಕೆಗೆ ತಮ್ಮ ತಾಯಿಯನ್ನು ಕರೆತಂದ ಲಕ್ಷ್ಮಿ ಹೆಬ್ಬಾಳಕರ, ತಾಯಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button