Kannada NewsLatest

ಕಾಂಗ್ರೆಸ್ ಬಲವರ್ಧನೆಗೆ ಚಿಂತನಾ ಶಿಬಿರ: 4 ಅನುಷ್ಠಾನ ಸಮಿತಿಗಳ ಚರ್ಚೆ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ – ಇಲ್ಲಿಯ ಡಾ. ಎನ್.ಎಸ್.‌ ಹರ್ಡೇಕರ್‌ ತರಬೇತಿ ಕೇಂದ್ರದಲ್ಲಿ  ಶುಕ್ರವಾರ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ನವ ಸಂಕಲ್ಪ ಚಿಂತನಾ ಶಿಬಿರ ನಡೆಯಿತು.
ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆ ಮಾಡುವ ಹಿನ್ನೆಲೆಯಲ್ಲಿ 4 ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು.
ಸರ್ವ ಧರ್ಮದವರೂ ಪ್ರಗತಿಯತ್ತ ಸಾಗಬೇಕೆಂದರೆ ಅದು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ
– ಸತೀಶ್ ಜಾರಕಿಹೊಳಿ
 ಶಿಬಿರ ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಬೇಕೆಂದು ಕರೆ ನೀಡಿದರು.
 ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿನ ಬೆಳೆವಣಿಗೆಗಳನ್ನು ಸೆಕೆಂಡ್‌ಗಳಲ್ಲಿ ಜನಸಾಮಾನ್ಯರಿಗೆ ತಲುಪಿಸಿ ಅವರ ನಡುವೆ ಸಂವಹನ ಸಾಮರ್ಥ್ಯ‌ವನ್ನು ಹೆಚ್ಚಿಸುವಲ್ಲಿ ನೆರವಾಗಿವೆ. ಹೀಗಾಗಿ ಪ್ರಸ್ತುತ ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣಗಳ ಅಗತ್ಯತೆ ಇದೆ ಎಂದರು.
2023ಕ್ಕೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದ್ದು, ಅದಕ್ಕೆ ಇಂದಿನಿಂದಲೇ ತಯಾರಿ ನಡೆಸಬೇಕು. ಯುವಕರು ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸಬೇಕೆಂದು ಕರೆ ನೀಡಿದರು.
ದೇಶದಲ್ಲಿ ಇತ್ತೀಚಿಗೆ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಅದನ್ನು ತಡೆಯಬೇಕು. ಸರ್ವ ಧರ್ಮದವರೂ ಪ್ರಗತಿಯತ್ತ ಸಾಗಬೇಕೆಂದರೆ ಅದು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ಹೀಗಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಎಂದು ತಿಳಿಸಿದರು.

ಚನ್ನರಾಜ ಹಟ್ಟಿಹೊಳಿ ಚರ್ಚೆ

ಸಾಮಾಜಿಕ ನ್ಯಾಯ, ಮಹಿಳಾ/ಯುವಕರ ಸಬಲೀಕರಣ ಹಾಗೂ ಉದ್ಯೋಗವಕಾಶಗಳ ಸೃಷ್ಟಿ ಹಾಗೂ ನಾ ನಾಯಕಿ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅನುಷ್ಠಾನ ಸಮಿತಿಯ ಚೇರಮನ್ ಆಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಉದ್ಘಾಟನೆ ಕಾರ್ಯಕ್ರಮದ ನಂತರ ಸಮಿತಿಯ ಸದಸ್ಯರೊಂದಿಗೆ ಸುಧೀರ್ಘವಾಗಿ ಚರ್ಚಿಸಿದರು.
ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಮೊದಲಿನಿಂದಲೂ ಆದ್ಯತೆ ನೀಡುತ್ತಬಂದಿದೆ. ಯುವಕರಿಗೆ ಸಾಕಷ್ಟು ಅವಕಾಶವನ್ನು ನೀಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಹಾಗಾಗಿ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ ಪಕ್ಷವನ್ನು ಸದೃಢಗೊಳಿಸಬೇಕು ಎಂದು ಅವರು ಕರೆ ನೀಡಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಆ ದಿಸೆಯಲ್ಲಿ ನಾವು ಅವಿಶ್ರಾಂತವಾಗಿ, ವ್ಯವಸ್ಥಿತವಾಗಿ ಯೋಜನೆ ಹಾಕಿಕೊಂಡು ಕೆಲಸ ಮಾಡಬೇಕಿದೆ. ಸೆಲ್ಫ್ ಸ್ಟಾರ್ಟ್ ರೀತಿಯಲ್ಲಿ ನೀವೆಲ್ಲ ಮುನ್ನುಗ್ಗಬೇಕಿದೆ ಎಂದು ಚನ್ನರಾಜ ಸೂಚಿಸಿದರು.
  ಸಂದರ್ಭದಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಮಾಜಿ ಸಚಿವ ವೀರಕುಮಾರ ಪಾಟೀಲ್‌, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಾಜಿ ಶಾಸಕರಾದ ಕಾಕಾ ಸಾಹೇಬ್‌ ಪಾಟೀಲ್‌, ಶ್ಯಾಮ್‌ ಘಾಟಗೆ, ಕಾಂಗ್ರೆಸ್‌ ಮುಖಂಡರಾದ ಮಹಾವೀರ ಮೋಹಿತೆ, ಸದಾನಂದ ಡಂಗಣ್ಣವರ್‌, ಸುನೀಲ್‌ ಹಣಮಣ್ಣವರ್‌, ದಯಾನಂದ ಪಾಟೀಲ್‌, ಗಜಾನನ ಮಂಗಸೂಳಿ ಸೇರಿದಂತೆ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button