ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಿಎಸ್ ಟಿ ತೆರಿಗೆ ವಿಧಾನವನ್ನು ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ವಾಣಿಜ್ಯ ತೆರಿಗೆ ಇಲಾಖೆಯ ವತಿಯಿಂದ ಜಿ ಎಸ್ ಟಿ ದಿನಾಚರಣೆ ಉದ್ಘಾಟನೆ ಹಾಗೂ ಮುಖ್ಯಮಂತ್ರಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತೆರಿಗೆ ವಿಧಾನದಲ್ಲಿನ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಜಿಎಸ್ ಟಿ ತೆರಿಗೆ ವಿಧಾನದ ತಂತ್ರಜ್ಞಾನ, ಅನುಸರಣೆ, ಹೊಸ ಉಪಕ್ರಮಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾದಾಗಲೂ ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿನ ಸಧೃಡ, ಪರಿಣಿತ ತೆರಿಗೆ ಅಧಿಕಾರಿ ಸಿಬ್ಬಂದಿಗಳಿಂದ ಇಂತಹ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಒಂದು ತೆರಿಗೆ ವಿಧಾನದಿಂದ ಹೊಸ ತೆರಿಗೆ ವಿಧಾನಕ್ಕೆ ಅತ್ಯಂತ ಸರಳವಾಗಿ ಅಳವಡಿಸಿಕೊಂಡಿರುವುದು ಅಭಿನಂದನೀಯ ಎಂದು ತಿಳಿಸಿದರು.
ಜಿಎಸ್ಟಿ ಬಗ್ಗೆ ಹತ್ತು ವರ್ಷಗಳ ಕಾಲ ಚರ್ಚೆಯಾಗಿದೆ. ಜಿ ಎಸ್ ಟಿ ಬಿಲ್ ನ್ನು ಎಲ್ಲ ರಾಜ್ಯಗಳೊಂದಿಗೆ ಚರ್ಚಿಸಿ , ಎಲ್ಲರ ಸಹಮತಿಯನ್ನು ಪಡೆದು ದಿ. ಅರುಣ್ ಜೇಟ್ಲಿ ಕೇಂದ್ರ ಸಚಿವರಿದ್ದಾಗ ಜಾರಿಗೊಳಿಸಿದರು. ಒಂದು ತೆರಿಗೆಯ ವಿಧಾನ , ಇನ್ನೊಂದು ತೆರಿಗೆಯ ವಿಧಾನಕ್ಕೆ ಹೋದಾಗ ಬಹಳಷ್ಟು ಅಕೌಂಟ್ಸ್ ಮತ್ತು ನಿರ್ವಹಣೆಯ ಸಮಸ್ಯೆಗಳಾಗುತ್ತವೆ. ರಾಜ್ಯ ಹಾಗೂ ಕೇಂದ್ರ ವಾಣಿಜ್ಯ ತೆರಿಗೆ , ವ್ಯಾಟ್ ವಿಧಾನವನ್ನು ನೋಡಿದ್ದೇವೆ. 1997-98 ರಲ್ಲಿ ವ್ಯಾಟ್ ತೆರಿಗೆ ಪದ್ಧತಿ ಪ್ರಾರಂಭಿಸಲಾಯಿತು. ಆ ಸಂದರ್ಭದಲ್ಲಿಯೂ ಹಲವು ಪ್ರಶ್ನೆಗಳು ಎದ್ದಿದ್ವು. ಜಿ ಎಸ್ ಟಿ ಯಾರಿಗೂ ಹೊರೆಯಾಗದೆ, ಉತ್ಪದಾನೆ , ಮಾರಾಟ ಪ್ರಕ್ರಿಯೆಯ ವಿವಿಧ ಹಂತದಲ್ಲಿ ತೆರಿಗೆಯನ್ನು ಹಾಕಲಾಗುತ್ತದೆ. ಟ್ಯಾಕ್ಸ್ ಸ್ಲ್ಯಾಬ್ ಗಳು ಆದಷ್ಟು ಕಡಿಮೆಯಿರಬೇಕು ಎನ್ನುವ ಉದ್ದೇಶವಿದ್ದರೂ ಕೂಡ ದೇಶಿಯ ಹಾಗೂ ಅಂತರರಾಜ್ಯ ವಹಿವಾಟು ಇದೆ. ಎಲ್ಲ ಉತ್ಪನ್ನಗಳಿಗೂ ತನ್ನದೇ ಆದ ಪ್ರಕ್ರಿಯೆಯ ವಿವಿಧ ಹಂತಗಳಿರುತ್ತವೆ. ಆದ್ದರಿಂದ ಜಿಎಸ್ ಟಿ ವಿಧಾನದಲ್ಲಿ 3 ಸ್ಲ್ಯಾಬ್ಗಳು ಹಾಗೂ ವಿಶೇಷ ತೆರಿಗೆ ಸ್ಲ್ಯಾಬ್ ಗಳನ್ನು ಒಪ್ಪಿಕೊಂಡಿದೆ ಎಂದರು.
ತೆರಿಗೆಗೆ ನಿರ್ದಿಷ್ಟ ತತ್ವಗಳಿವೆ :
ಪ್ರಾರಂಭದಲ್ಲಿ ರಾಜ್ಯದ ತೆರಿಗೆಗಳಿಗೆ ಸಂಬಂಧಿಸಿದಂತೆ ಅವಶ್ಯಕತೆಯಿದ್ದಾಗ ತೆರಿಗೆಗಳಿಗೆ ಹೆಡ್ ರೂಂಗಳನ್ನು ಸೃಜಿಸಲಾಗಿದೆ. ಆದಾಯ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ತಳಹಂತದಲ್ಲಿನ ಚಟುವಟಿಕೆಗಳಿಂದ ನಮ್ಮ ಆರ್ಥಿಕತೆಯನ್ನು ನಿಗದಿಪಡಿಸುತ್ತದೆ.ಇಂಥಹ ಸಮುದಾಯಗಳ ಮೇಲೆ ಹೆಚ್ಚಿನ ಗಮನ ಹರಿಸಿ. ಪ್ರದೇಶ ಹಾಗೂ ಸಮುದಾಯ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ತೆರಿಗೆಗೆ ನಿರ್ದಿಷ್ಟ ತತ್ವಗಳಿವೆ. ತೆರಿಗೆಯು ಉದ್ದೇಶ, ನಿಭಾಯಿಸುವಿಕೆ, ಉತ್ತರದಾಯಿತ್ವ ಹಾಗೂ ನ್ಯಾಯಸಮ್ಮತವಾಗಿರಬೇಕು. ಇವು ತೆರಿಗೆಯ ನಾಲ್ಕು ಪ್ರಮುಖ ಸ್ಥಂಭಗಳು. ಇದನ್ನು ಪಾಲಿಸಿದರೆ ರಾಜಸ್ವಸಂಗ್ರಹದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇದನ್ನು ನಾವು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಈ ಎಲ್ಲಾ ತತ್ವಗಳನ್ನು ಪಾಲಿಸಿದ್ದಾರೆ ಎಂಬ ವಿಶ್ವಾಸ ನನಗಿತ್ತು ಎಂದರು.
ರಾಜಸ್ವ ಸಂಗ್ರಹದಲ್ಲಿ ಕೋವಿಡ್ ನಡುವೆಯೂ ಗುರಿ ಮೀರಿ ಸಾಧನೆ :
ತೆರಿಗೆ ಹೆಚ್ಚಿಸದೆ, ರಾಜಸ್ವ ಸಂಗ್ರಹ ಹೆಚ್ಚಲಿದೆ ಎಂಬ ಅರಿವಿದ್ದೇ ರಾಜ್ಯ ಆಯವ್ಯಯದಲ್ಲಿ ತೆರಿಗೆ ವಿಧಿಸಲಿಲ್ಲ. ಕೋವಿಡ್ ಆಗಷ್ಟೇ ಮುಗಿದ ಸಂದರ್ಭದಲ್ಲಿ ಕಳೆದ ವರ್ಷ ಆಗಸ್ಟ್ – ಸೆಪ್ಟೆಂಬರ್ ನಲ್ಲಿ ಪರಿಶೀಲನೆ ಮಾಡಿದಾಗ ಆಯವ್ಯಯ ಅಂದಾಜಿನ ಪ್ರಕಾರ 2000 ಕೋಟಿ ರೂ.ಗಳಷ್ಟು ಮೊತ್ತ ಕಡಿಮೆ ಇತ್ತು. ಅಧಿಕಾರಿಗಳ ಜೊತೆ ಮಾತನಾಡಿದಾಗ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಆರು ತಿಂಗಳೊಳಗೆ ಗುರಿ ಮೀರಿ 15,000 ಕೋಟಿ ರೂ.ಗಳನ್ನು ಸಂಗ್ರಹಿಸಲಾಯಿತು. ಈ ಪೈಕಿ 7000 ಕೋಟಿ ಜಿಎಸ್ ಟಿ ಇಂದಲೇ ಬಂದಿದೆ ಎಂದರು.
ರಾಜಸ್ವ ಸಂಗ್ರಹವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು:
ನಮ್ಮ ರಾಜ್ಯದ ಬೆಳವಣಿಗೆಗೆ ಆರ್ಥಿಕ ಇಲಾಖೆ ದೊಡ್ಡ ಕೊಡುಗೆ ನೀಡುತ್ತಿದೆ. ರಾಜಸ್ವ ಸಂಗ್ರಹವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಸಾಮಾನ್ಯ ಜನರ ಕಷ್ಟದ ಗಳಿಕೆ ಅದು. ಅದರ ಬಗ್ಗೆ ನಾವು ಸದಾ ಕಾಲ ಎಚ್ಚರಿಕೆಯನ್ನು ವಹಿಸಬೇಕು. ಆರ್ಥಿಕತೆ ಎಂದರೆ ಹಣವಲ್ಲ. ಜನರ ಸಾಮಥ್ರ್ಯವೇ ಆರ್ಥಿಕತೆ. ಜನರ ದುಡಿಮೆ ಆರ್ಥಿಕತೆಯನ್ನು ನಿರ್ಧರಿಸುತ್ತದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಚಿಂತನೆಯನ್ನು ಇಟ್ಟುಕೊಂಡು ರಾಜ್ಯವನ್ನು ಕಟ್ಟಬೇಕಿದೆ. ರಾಜ್ಯದ ಪ್ರಗತಿ ಪ್ರತಿ ವರ್ಷ ಎಷ್ಟು ಮೂಲ ಬಂಡವಾಳವನ್ನು ಹೂಡಿಕೆ ಮಾಡುತ್ತೇವೆ ಎನ್ನುವುದರ ಮೇಲಿದೆ. ಕಳೆದ ವರ್ಷ ಒಟ್ಟು ಒಂದು ಲಕ್ಷ ಕೋಟಿ ಸಂಗ್ರಹವಾಗಿದೆ. ನಿಮ್ಮ ಆಸಕ್ತಿ, ಬದ್ಧತೆ, ಶ್ರಮವನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇದು ಪ್ರತಿ ವರ್ಷ ಮುಂದುವರೆಯಲಿದೆ. ಉಳಿದವರಿಗೂ ಇದು ಪ್ರೇರಣೆಯಾಗಲಿ ಎನ್ನುವ ಚಿಂತನೆಯಿಂದ ಈ ಕೆಲಸ ಮಾಡಿದ್ದೇವೆ ಎಂದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಜಿಎಸ್ ಟಿ ಸರಳ ನಿಯಮ: ಮೇಜರ್ ಪರಮದೀಪ್ ಸಿಂಗ್ ಬಾಜ್ವಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ