ದಕ್ಷಿಣದ ಕಾಶಿ ಹೊರನಾಡು : ಹುಕ್ಕೇರಿ ಶ್ರೀಗಳು
ಪ್ರಗತಿವಾಹಿನಿ ಸುದ್ದಿ, ಹೊರನಾಡು:
ಹೊರನಾಡು ಇವತ್ತು ದಕ್ಷಿಣದ ಕಾಶಿಯಾಗಿ ಹೊರಹೊಮ್ಮಿದೆ. ನಿತ್ಯವೂ ಸಾವಿರಾರು ಜನ ಭಕ್ತಾದಿಗಳು ಇಲ್ಲಿ ಬಂದು ನೆಮ್ಮದಿಯಿಂದ ತವರು ಮನೆಗೆ ಬಂದಿದ್ದೇವೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.
ಡಾ. ಭೀಮೇಶ್ವರ ಜೋಷಿಯವರು ಧರ್ಮ ಕರ್ತೃರಾದಾಗಿನಿಂದಲೂ ಈ ಕ್ಷೇತ್ರ ಉನ್ನತಮಟ್ಟಕ್ಕೇರುತ್ತಿರುವುದು, ಎಪ್ಪತ್ತು ಲಕ್ಷಕ್ಕೂ ಮಿಗಿಲಾಗಿ ವೆಚ್ಚ ಮಾಡಿ ಸಾವಿರಾರು ಸಾಮೂಹಿಕ ವಿವಾಹವನ್ನು ಮಾಡಿರುವುದು ಅಭಿಮಾನದ ಸಂಗತಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಹೊರನಾಡು ಕ್ಷೇತ್ರದಲ್ಲಿ ಶುಕ್ರವಾರ ಸಾಮೂಹಿಕ ವಿವಾಹ ಸಂದರ್ಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸೂರು ಇಲ್ಲದವರಿಗೆ ಹಂಚನ್ನು ವಿತರಿಸುವುದು, ಹಾಗೆಯೇ ಚಿಕ್ಕ ಚಿಕ್ಕ ದೇವಸ್ಥಾನಗಳಿಗೆ ತಟ್ಟೆ ಲೋಟವನ್ನು ವಿತರಿಸುವುದು, ಕೃಷಿಕರಿಗೆ ಬೇಕಾಗಿರುವ ಸಾಮಾಗ್ರಿಗಳನ್ನು ನೀಡುವುದು, ಇದು ನಿಜಕ್ಕೂ ಅಭಿಮಾನದ ಸಂಗತಿ. ಲಕ್ಷಾಂತರ ಕುಟುಂಬಗಳಿಗೆ ವಿದ್ಯುತ್ ಶಕ್ತಿಯನ್ನು ಉಚಿತವಾಗಿ ನೀಡಿ ಅವರ ಬಾಳಿಗೆ ಬೆಳಕಾಗಿ ಶ್ರೀ ಕ್ಷೇತ್ರ ನಿಲ್ಲುತ್ತಿದೆ. ಧರ್ಮಕ್ಷೇತ್ರಗಳು ಈ ನಿಟ್ಟಿನ ಕೆಲಸ ಮಾಡಿದ ಸಂದರ್ಭ ದೇಶದ ಬೆಳವಣಿಗೆ ಸಾಧ್ಯ. ದೇವಸ್ಥಾನಕ್ಕೆ ಕೊಡುವ ಹಣ ಸಮಾಜಕ್ಕೆ ವಿನಿಯೋಗವಾಗುತ್ತಿರುವುದು ಅಭಿಮಾನದ ಸಂಗತಿ. ಡಾ. ಭೀಮೇಶ್ವರ ಜೋಶಿಯವರ ಕರ್ತೃತ್ವ ಶಕ್ತಿಯನ್ನು ಮೆಚ್ಚಬೇಕು ಎಂದು ಅವರು ಹೇಳಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಭೀಮೇಶ್ವರ ಜೋಷಿ, ಹೊರನಾಡಿಗೂ ಹುಕ್ಕೇರಿಗೂ ಅವಿನಾಭಾವ ಸಂಬಂಧವಿದೆ. ಹೊರನಾಡಿನಲ್ಲಿಯೂ ಅನ್ನಪೂರ್ಣೇಶ್ವರಿ ಇದ್ದಾಳೆ. ಹುಕ್ಕೇರಿಯಲ್ಲಿಯೂ ಅನ್ನಪೂರ್ಣೇಶ್ವರಿ ಇದ್ದಾಳೆ. ಹಾಗೇ ಜಗನ್ಮಾತೆಯ ಆಶೀರ್ವಾದದಿಂದ ಎಲ್ಲರೂ ಕೂಡ ಬೆಳೆಯಬೇಕು, ಹಾಗೆಯೇ ಜನನಾಯಕರು ಜನರಿಗೆ ಉಪಯೋಗ ವಾಗುವ ಕಾರ್ಯವನ್ನು ಮಾಡಬೇಕು ಎಂದರು.
ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ದೇವಸ್ಥಾನಗಳ ಹುಂಡಿಯ ಹಣ ಸಮಾಜಕ್ಕೆ ಉಪಯೋಗವಾಗುತ್ತಿದೆ. ಅದಕ್ಕಾಗಿ ನಾವೆಲ್ಲರೂ ಕೂಡ ದೇವಸ್ಥಾನಗಳಿಗೆ ಹೆಚ್ಚು ಭಕ್ತಿಯನ್ನು ಸಮರ್ಪಿಸಬೇಕು ಎಂದರು.
ಚಿತ್ರನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಮಾತನಾಡಿ ಕ್ಷೇತ್ರದ ಆಶೀರ್ವಾದದಿಂದ ನಾನು ಇಷ್ಟು ಬೆಳೆಯಲು ಸಾಧ್ಯವಾಗಿದೆ. ಕ್ಷೇತ್ರದ ಆಜ್ಞೆಯಂತೆ ನಿರಂತರ ನಡೆದುಕೊಳ್ಳುತ್ತೇನೆ ಎಂದರು. ಮೂಡಬಿದರೆ ಶಾಸಕ ಕುಮಾರಸ್ವಾಮಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಹೊರನಾಡು ಇದೆ. ಇದರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದರು.
ಶೃಂಗೇರಿ ಶಾಸಕ ಹಾಗೂ ಮಲೆನಾಡು ಅಭಿವೃದ್ಧಿ ಅಧ್ಯಕ್ಷರಾದ ರಾಜು ಗೌಡ ಮಾತನಾಡಿ ನನ್ನ ಬದುಕಿನಲ್ಲಿ ಧರ್ಮ ಕ್ಷೇತ್ರಗಳಿಗೆ ಹೆಚ್ಚು ಸೇವೆಯನ್ನು ಮಾಡುತ್ತೇನೆ. ಧರ್ಮಕ್ಷೇತ್ರಗಳಿಂದ ಇಂತಹ ಅದ್ಭುತವಾದ ಕಾರ್ಯಕ್ರಮಗಳು ಜರುಗುತ್ತಿವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ