Latest

ಗೃಹ ಸಚಿವರ ರಾಜೀನಾಮೆ ಕೇಳುವ ಅಧಿಕಾರ ಕಾಂಗ್ರೆಸ್ ಗಿಲ್ಲ; ಡಿಕೆಶಿಗೆ ಟಾಂಗ್ ನೀಡಿದ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವರ ರಾಜೀನಾಮೆ ಕೇಳುವ ಅಧಿಕಾರ ಅವರಿಗಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಪಿಎಸ್ ಐ ಅಕ್ರಮದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನದ ಬೆನ್ನಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನವರ ಕಾಲದಲ್ಲಿಯೂ ಪಿಎಸ್ ಐ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಹಿರಿಯ ಅಧಿಕಾರಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದರು. ಆಗ ಅವರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಗರಣವನ್ನೇ ಮುಚ್ಚಿ ಹಾಕಿತ್ತು ಎಂದು ಕಿಡಿಕಾರಿದ್ದಾರೆ.

ನಾವು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸಿಐಡಿ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಇದ್ದಿದ್ದರೆ ಕೇಸ್ ಮುಚ್ಚಿ ಹಾಕುತ್ತಿತ್ತು.

ಕಾಂಗ್ರೆಸ್ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಮುಚ್ಚಿ ಹಾಕಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಪ್ರಸ್ತುತ ಪಿಎಸ್ ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ಸಮರ್ಪಕವಗೈ ತನಿಖೆ ನಡೆಸುತ್ತಿದೆ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು ಅಕ್ರಮ ನಡೆಸಿದ್ದರೆ ಯಾರನ್ನು ಬೇಕಿದ್ದರೂ ಬಂಧಿಸಿ ವಿಚಾರಣೆ ನಡೆಸಬಹುದು. ಗೃಹ ಸಚಿವರ ರಾಜೀನಾಮೆ ಕೇಳುವ ಅಧಿಕಾರ ಕಾಂಗ್ರೆಸ್ ನವರಿಗಿಲ್ಲ. ಗೃಹ ಸಚಿವರ ಮಹತ್ವದ ನಿರ್ಧಾರದಿಂದಾಗಿಯೇ ಇಂದು ಅಕ್ರಮದಲ್ಲಿ ಭಾಗಿಯಾಗಿರುವ ಹಲವು ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಸಂಸದ ತೇಜಸ್ವಿ ಸೂರ್ಯ ವಿಚಾರಣೆಗೊಳಪಡಿಸಿದ ದೆಹಲಿ ಪೊಲೀಸರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button