Kannada NewsKarnataka NewsLatest

ನಿಡಸೋಸಿ ಜಗದ್ಗುರುಗಳ ಯೋಗಕ್ಷೇಮ ವಿಚಾರಿಸಲು ಶ್ರೀಗಳು, ಭಕ್ತರ ದಂಡು

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ: ರಸ್ತೆ ಅಪಘಾತಕ್ಕೀಡಾಗಿ ಬುಧವಾರ ಗಾಯಗೊಂಡಿದ್ದ  ನಿಡಸೋಸಿಯ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಆರೋಗ್ಯ ವಿಚಾರಿಸಲು ಗಡಿಭಾಗದ ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆಯಿಂದ ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ ಸಹಸ್ರಾರು ಭಕ್ತರ ದಂಡು ಶ್ರೀಮಠಕ್ಕೆ ಆಗಮಿಸುತ್ತಿದೆ.

ಧಾರವಾಡ ಜಿಲ್ಲೆಯ ತೇಗೂರ ಬಳಿ ಭೀಕರ ಅಪಘಾತದಲ್ಲಿ ಸಿನಿಮಿಯ ರೀತಿಯಲ್ಲಿ ಅಪಘಾತದಲ್ಲಿ   ಪ್ರಾಣಾಪಾಯದಿಂದ ಪಾರಾಗಿದ್ದು, ನಿನ್ನೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಶ್ರೀಮಠಕ್ಕೆ ಆಗಮಿಸಿದ್ದರು. ತಡರಾತ್ರಿ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಶ್ರೀಗಳ ಆರೋಗ್ಯ ವಿಚಾರಿಸಲು ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆ ಶ್ರೀಮಠದ ಮುಂದೆ ಜಮಾಯಿಸಿದ್ದರು. ಬಳಿಕ ಶ್ರೀಗಳು ಭಕ್ತರ ಜೊತೆಗೆ ಮಾತನಾಡಿ, ನಂತರ ವಿಶ್ರಾಂತಿ ಪಡೆದುಕೊಂಡರು.

ಬೆಳಿಗ್ಗೆ ಶ್ರೀಗಳ ಆರೋಗ್ಯ ವಿಚಾರಿಸಲು ಶ್ರೀಶೈಲ 1008  ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ, ಶ್ರೀಗಳ ಆರೋಗ್ಯ ಕ್ಷೇಮವಾಗಿದ್ದು, ನಿಡಸೋಸಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಗಡಿಭಾಗದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಮಾತೃವಿನ ಮಮತೆ ಬಿತ್ತಿದವರು. ಈ ಭಾಗದ ಸಂಸ್ಕೃತಿ-ಸಂಸ್ಕಾರ ಉಳಿಸುವಲ್ಲಿ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದರು.

ತಮ್ಮ ಆರೋಗ್ಯ ವಿಚಾರಿಸಲು ಬರುವ ಭಕ್ತರ ಕುಶಲೋಪರಿ ವಿಚಾರಿಸುತ್ತ ನಗುಮುಖದಿಂದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಅಪಘಾತದ ವಿವರಣೆ ನೀಡುತ್ತ “ನನಗೇನೂ ಆಗಿಲ್ಲ, ದುರದುಂಡೆಪ್ಪ ಈ ಮಠಕ್ಕ ಕರಕೊಂಡ ಬಂದಾನ್” ಅಂತ ಹೇಳಿ ತಮಗಾಗಿರುವ ನೋವು ಮರೆತು ಬರುವ ಭಕ್ತರಿಗೆಲ್ಲ ಧೈರ್ಯ ತುಂಬುವ ಕೆಲಸ ಮಾಡಿದರು.

ಆಹಾರ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಶ್ರೀಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಕುಶಲೋಪರಿ ವಿಚಾರಿಸಿ, ಶ್ರೀಗಳಿಗೆ ಅಪಘಾತದಲ್ಲಿ ಯಾವುದೇ ನೋವಾಗಿಲ್ಲ. ಆರೋಗ್ಯ ಸ್ಥಿರವಾಗಿದೆ. ಈ ಭಾಗದ ಜನರಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸ್ವಾಮೀಜಿ ದೈವಿಸ್ವರೂಪಿಯಾಗಿದ್ದು, ಮಹಾದೇವ ಈ ಜೀವಂತ ದೇವರನ್ನು ಉಳಿಸಿಕೊಟ್ಟಿದ್ದಾನೆ ಎಂದರು.

ಗದಗ ತೋಂಟದಾರ್ಯ ಮಠ ಶ್ರೀಗಳು, ಬೆಳಗಾವಿಯ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಬೊಮ್ಮನಳ್ಳಿಯ ಶಿವಯೋಗಿ ಸ್ವಾಮೀಜಿ, ನಾಗನೂರ ಮಠದ ಶಿವಬಸವ ಸ್ವಾಮೀಜಿ ಶೇಗುಣಸಿ ಮಹಾಂತ ದೇವರು, ಇಳಕಲ್ ಶಿವಬಸವ ಸ್ವಾಮೀಜಿ, ಹಂದಗುಂದ ಶಿವಾನಂದ ಸ್ವಾಮೀಜಿ, ಮಣಕವಾಡ ಅಭಿನವ ಮೃತ್ಯುಂಜಯ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಚಿಕ್ಕಲಪರವಿಯ ವಿರೂಪಾಕ್ಷ ಸ್ವಾಮೀಜಿ, ಗುಬ್ಬಲಗುಡ್ಡ ಮಲ್ಲಿಕಾರ್ಜುನ ಸ್ವಾಮೀಜಿ, ಸಂಕೇಶ್ವರ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಯರನಾಳದ ಬ್ರಹ್ಮಾನಂದ ಸ್ವಾಮೀಜಿ, ಬಾಗೇವಾಡಿ ಶಿವಾನಂದ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಭೇಟಿ ನೀಡಿದ್ದು ಚಿಮ್ಮಡ, ಆಡಿ, ನೂಲ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಭಕ್ತವಲಯ ಆಗಮಿಸುತ್ತಿದೆ.

ಪಿಯು ವಿದ್ಯಾರ್ಥಿಗಳು ಇನ್ಮುಂದೆ ಕಾಲೇಜಿಗೆ ಬೈಕ್ ತರುವಂತಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button