ಇನ್ನೂ ನಾಲ್ಕೈದು ದಿನ ಮಳೆ ಸಾಧ್ಯತೆ; ಬೆಳಗಾವಿ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಳೆಯ ಅಬ್ಬರ ಇನ್ನೂ ನಾಲ್ಕೈದು ದಿನ ಮುಂದುವರಿದಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, ಮಹಾರಾಷ್ಟ್ರದ ಪಶ್ಚಿಮಘಟ್ಟದ ಪ್ರದೇಶದಲ್ಲಿ ಮಳೆಯಬ್ಬರ ಕಡಿಮೆಯಾಗಿಲ್ಲ. ಇದರಿಂದ ನದಿಗಳ ಒಳಹರಿವು ಹೆಚ್ಚಿದ್ದು ಚಿಕ್ಕೋಡಿ ತಾಲೂಕಿನ ಯಡೂರು, ಕಲ್ಲೋಳ, ಮಲಿಕವಾಡ, ದತ್ತವಾಡ, ಕಾರದಗಾ ಹಾಗೂ ಭೋಜ ಸೇತುವೆಗಳು ಇನ್ನೂ ಮುಳುಗಡೆಯಾಗಿವೆ. ಜನ ಪರ್ಯಾಯ ಮಾರ್ಗಗಳಿಂದ ಸಂಚಿಸಸುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರತೊಡಗಿದೆ. ಅಷ್ಟೇ ಪ್ರಮಾಣದ ನೀರನ್ನು ಹಿಪ್ಪರಗಿ ಬ್ಯಾರೇಜ್ ನಿಂದ ಬಿಡುತ್ತಿರುವುದರಿಂದ ಪ್ರವಾಹ ಸದೃಶ ಪರಿಸ್ಥಿತಿ ಇದೆ ಎಂದರು.
ಮಹಾರಾಷ್ಟ್ರದ ಕೊಯ್ನಾ ಜಲಾಶಯದಲ್ಲಿ ಶೇ.22ರಷ್ಟು ಮಾತ್ರ ನೀರಿದ್ದು ಮಹಾರಾಷ್ಟ್ರದ ಯಾವುದೇ ಡ್ಯಾಂ ಗಳಿಂದ ನೀರು ಬಿಡಲಾಗುತ್ತಿಲ್ಲ. ಜಿಲ್ಲೆಯ ಹಿಡಕಲ್ ಜಲಾಶಯದಲ್ಲಿ ಶೇ.17.5 ನವಿಲುತೀರ್ಥದಲ್ಲಿ ಶೇ.34ರಷ್ಟು, ಮಾರ್ಕಂಡೇಯ ಜಲಾಶಯದಲ್ಲಿ ಶೇ.36ರಷ್ಟು ಮಾತ್ರ ಸಂಗ್ರಹವಿದೆ. ಹೀಗಾಗಿ ಈ ಡ್ಯಾಂ ಗಳಲ್ಲಿ ಎಷ್ಟೇ ಒಳಹರಿವು ಹೆಚ್ಚಿದರೂ ಸದ್ಯ ಆತಂಕವಿಲ್ಲ ಎಂದರು.
ಜಿಲ್ಲೆಯ್ಲಿ ಮಳೆಯಿಂದ 37 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಖಾನಾಪುರ ತಾಲೂಕಿನ ಒಂದು ಶಾಲೆ ಹಾನಿಗೀಡಾಗಿದೆ. 2 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ, ಬಾಳೇಹಣ್ಣು ಬೆಳೆ ನಾಶವಾಗಿದೆ ಎಂದರು.
ಸದ್ಯ ಎನ್ ಡಿಆರ್ ಎಫ್ ತಂಡ ಎಲ್ಲ ಸ್ಥಿತಿಗತಿಗಳನ್ನು ನಿಭಾಯಿಸಲು ಸಿದ್ಧವಿದ್ದು ಪರಿಹಾರ, ತುರ್ತು ಕ್ರಮಕ್ಕೆ ಹಣಕಾಸಿನ ಯಾವುದೇ ತೊಂದರೆಗಳಿಲ್ಲ ಎಂದರು.
ನಾಪತ್ತೆಯಾಗಿದ್ದ ಸೈನ್ಯಾಧಿಕಾರಿ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ