ಪ್ರಗತಿವಾಹಿನಿ ಸುದ್ದಿ, ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ನಡೆಸುತ್ತಿರುವ ರೆಸ್ಟೋರಂಟ್ ಗೆ ಗೋವಾ ಸರಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಗೋವಾ ರಾಜ್ಯದ ಆಸಾಗೋವಾದಲ್ಲಿ ಸ್ಮೃತಿ ಇರಾನಿ ಅವರ ಪುತ್ರಿ ಝೋಯಿಶ್ ಇರಾನಿ ಅವರು ‘ಸಿಲ್ಲಿ ಸೋಲ್ಸ್ ಕೆಫೆ ಆ್ಯಂಡ್ ಬಾರ್’ ಹೆಸರಿನ ರೆಸ್ಟೋರಂಟ್ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಈ ರೆಸ್ಟೋರಂಟ್ ಗೆ ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಲಿಕ್ಕರ್ ಲೈಸನ್ಸ್ ನವೀಕರಿಸಿರುವುದು ಗಮನಕ್ಕೆ ಬಂದಿದೆ. ನಕಲಿ ಹಾಗೂ ತಿರುಚಿದ ದಾಖಲೆಗಳನ್ನು ಬಳಸಿ ಈ ಲೈಸನ್ಸ್ ಪಡೆಯಲಾಗಿದೆ ಎಂದು ಆರೋಪಿಸಿ ವಕೀಲ ಐರಿಸ್ ರೊಡ್ರಗಿಸ್ ಎಂಬುವವರು ದೂರು ನೀಡಿದ್ದರು.
ಇದರ ಆಧಾರದಲ್ಲಿ ಗೋವಾ ಅಬಕಾರಿ ಆಯುಕ್ತ ನಾರಾಯಣ ಎಂ. ಗಡ ಅವರು ರೆಸ್ಟೋರಂಟ್ ಮಾಲೀಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಯಾರ ಹೆಸರಿನಲ್ಲಿ ಲಿಕ್ಕರ್ ಲೈಸನ್ಸ್ ಪಡೆಯಲಾಗಿದೆಯೋ ಆ ವ್ಯಕ್ತಿ 2021ರ ಮೇ 17ರಂದು ಮೃತಪಟ್ಟಿದ್ದಾರೆ. ಆದರೆ ಕಳೆದ ತಿಂಗಳಷ್ಟೇ ಆ ವ್ಯಕ್ತಿ ಹೆಸರಿನಲ್ಲಿ ಲಿಕ್ಕರ್ ಲೈಸನ್ಸ್ ನವೀಕರಣವಾಗಿದ್ದು ಇದರ ವಿವರ ನೀಡುವಂತೆ ನೋಟಿಸ್ ನಲ್ಲಿ ಕೇಳಲಾಗಿದೆ.
ಜು.29ರಂದು ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಈ ಮೂಲಕ ಕೇಂದ್ರ ಸಚಿವೆಯ ಪುತ್ರಿ ನಡೆಸುತ್ತಿರುವ ರೆಸ್ಟೋರಂಟ್ ಈಗ ವಿವಾದಕ್ಕೆ ಸಿಲುಕಿದೆ.
ಸಿದ್ದರಾಮೋತ್ಸವ ಅಪಪ್ರಚಾರ ಸುಳ್ಳು; ಅರವಿಂದ ದಳವಾಯಿ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ