ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಭಾನುವಾರ ಸಂಜೆ ವಿಟಿಯು ಆವರಣಕ್ಕೆ ಭೇಟಿ ನೀಡಿ ವೇದಿಕೆ ಮತ್ತಿತರ ವ್ಯವಸ್ಥೆಯನ್ನು ಪರಿಶೀಲಿಸಿದರು.
ಮುಖ್ಯ ಅತಿಥಿಗಳ ಆಸನ ವ್ಯವಸ್ಥೆ, ಭದ್ರತೆ, ಗ್ರೀನ್ ರೂಮ್ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ ಅವರು, ಉಪ ರಾಷ್ಟಪತಿಗಳು ಉಪಸ್ಥಿತರಿರುವಾಗ ಯಾವುದೇ ಅನಾನುಕೂಲ ಅಥವಾ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.

ವಿದ್ಯುತ್, ಧ್ವನಿವರ್ಧಕ, ಅಗ್ನಿಶಾಮಕ ತಂಡದವರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದರು. ಅದೇ ರೀತಿ ಭದ್ರತಾ ವ್ಯವಸ್ಥೆ ಮತ್ತು ಪಾರ್ಕಿಂಗ್ ಸ್ಥಳ ಪರಿಶೀಲಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕೆ ಸೂಚನೆ:
ಉಪ ರಾಷ್ಟ್ರಪತಿಗಳು ಸಂಚರಿಸಲಿರುವ ಸಂದರ್ಭದಲ್ಲಿ ರಸ್ತೆ ಮಾರ್ಗದಲ್ಲಿ ಸಾರ್ವಜನಿಕ ಸಂಚಾರ ನಿರ್ಭಂದಿಸಲಾಗಿರುತ್ತದೆ. ಆದಾಗ್ಯೂ ಪರೀಕ್ಷೆಗೆ ತೆರಳಲಿರುವ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಉಪ ರಾಷ್ಟ್ರಪತಿಗಳು ನಗರಕ್ಕೆ ಆಗಮಿಸುತ್ತಿರುವುದರಿಂದ ಸುಗಮ ರಸ್ತೆ ಸಂಚಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಕುಲಸಚಿವರಾದ ಡಾ. ಸತೀಶ್ ಅಣ್ಣಿಗೇರಿ, ಡಿಸಿಪಿ ಸೀಮಾ ಲಾಟ್ಕರ್, ಯಶೋಧಾ ಒಂಟಗೋಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.