ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಹೊರವಲಯದ ಬೆಳಗಾವಿ -ಪಣಜಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಂಗಳವಾರ ರಾತ್ರಿಯಿಂದ ವಾರಸುದಾರರಿಲ್ಲದೇ ನಿಂತಿದ್ದ ಬೆಂಗಳೂರು ನಗರದಲ್ಲಿ ನೊಂದಣಿ ಹೊಂದಿದ್ದ ಖಾಸಗಿ ಐಷಾರಾಮಿ ಟೂರಿಸ್ಟ್ ಬಸ್ ಪರಿಶೀಲಿಸಿದ ಪೊಲೀಸರು ಬಸ್ ನೊಂದಣಿ ಸಂಖ್ಯೆಯನ್ನಾಧರಿಸಿ ತನಿಖೆ ನಡೆಸಿದಾಗ ಈ ಬಸ್ ಫೆ.೨೭ರಂದು ಗೋವಾದಿಂದ ನಾಪತ್ತೆಯಾಗಿದ್ದ ವಿಷಯ ಬೆಳಕಿಗೆ ಬಂದಿದೆ.
ಫೆ.೨೫ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕೆಲ ಸ್ನೇಹಿತರು ಖಾಸಗಿ ಬಸ್ ಮೂಲಕ ಗೋವಾ ಪ್ರವಾಸಕ್ಕೆಂದು ತೆರಳಿದ್ದರು. ಫೋಂಡಾ ಬಳಿಯ ಹೋಟೆಲೊಂದರಲ್ಲಿ ಅವರು ತಂಗಿದ್ದರಿಂದ ಫೆ.೨೬ರ ಸಂಜೆ ಹೋಟೆಲ್ ಆವರಣದಲ್ಲಿ ಬಸ್‌ನ ಚಾಲಕ ಬಸ್ಸನ್ನು ನಿಲ್ಲಿಸಿದ್ದರು.
ಆದರೆ ಫೆ.೨೭ರಂದು ಮುಂಜಾನೆ ನೋಡಿದಾಗ ಬಸ್ ಹಿಂದಿನ ದಿನ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ. ಬಸ್‌ಗಾಗಿ ಹುಡುಕಾಟ ನಡೆಸಿ ಚಾಲಕ ಬಳಿಕ ಫೋಂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬುಧವಾರ ಪಟ್ಟಣದ ಹೊರವಲಯದ ರಸ್ತೆ ಪಕ್ಕದಲ್ಲಿ ಬಹಳ ಸಮಯದಿಂದ ಬಸ್ ನಿಂತಿದ್ದನ್ನು ಗಮನಿಸಿದ ಸ್ಥಳೀಯರು ಖಾನಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು, ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪಿಎಸ್‌ಐ ಬಸಗೌಡ ಪಾಟೀಲ ಹಾಗೂ ಸಿಬ್ಬಂದಿ ಬಸ್‌ನ್ನು ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದು, ಬಳಿಕ ತನಿಖೆ ಕೈಗೊಂಡು ಬಸ್ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಗೋವಾದಲ್ಲಿ ನಾಪತ್ತೆಯಾಗಿದ್ದ ಬಸ್ ಪಟ್ಟಣಕ್ಕೆ ಏಕೆ ಬಂತು ಮತ್ತು ಅದನ್ನೇಕೆ ಇಲ್ಲಿ ಬಿಟ್ಟು ಹೋದರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ