Belagavi NewsBelgaum NewsKannada NewsKarnataka NewsLatest

*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೋಡಲು ಓಡೋಡಿ ಬಂದ ಬಾಲಕಿ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕೆಲವು ತಿಂಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸಹಾಯದೊಂದಿಗೆ ಸವದತ್ತಿಯ ಹಾಸ್ಟೆಲ್ ನಲ್ಲಿ ಆಶ್ರಯ ಪಡೆದಿದ್ದ ಬಾಲಕಿಯೊಬ್ಬಳು ಶುಕ್ರವಾರ ಬೆಳಗಾವಿಯ ಆಸ್ಪತ್ರೆಗೆ ಓಡೋಡಿ ಬಂದು, ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಚಿವರ ಆರೋಗ್ಯ ವಿಚಾರಿಸಿದಳು.

ಮಾನವೀಯ ಸಂಬಂಧ ಎಂದರೆ ಏನು ಎನ್ನುವುದಕ್ಕೆ ಉದಾಹರಣೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಕೆಲವು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ಬಾಲಕಿಯೊಬ್ಬಳು ಮನೆಯಲ್ಲಿನ ಸಮಸ್ಯೆಯಿಂದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಳಿ ಬಂದು ಸಹಾಯ ಕೇಳಿದ್ದಳು. ತಕ್ಷಣ ಸ್ಪಂದಿಸಿದ ಸಚಿವರು, ಬಾಲಕಿಗೆ ಸವದತ್ತಿಯ ವಸತಿಗೃಹದಲ್ಲಿ ಆಶ್ರಯ ಒದಗಿಸಿ, ಆಕೆಗೆ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಮಾಡಿದ್ದರು.

ಇದೀಗ ಸಚಿವರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರಿರುವ ವಿಷಯ ತಿಳಿದ ಬಾಲಕಿ, ತಾನು ಸಚಿವರನ್ನು ನೋಡಲೇಬೇಕೆಂದು ಹಠ ಹಿಡಿದು, ತನ್ನ ಅಜ್ಜಿಯ ಜೊತೆಗೆ ಆಸ್ಪತ್ರೆಗೆ ಬಂದು ಸಚಿವರ ಆರೋಗ್ಯ ವಿಚಾರಿಸಿದಳು. ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದಳು. 

ಬಾಲಕಿ ತಮ್ಮ ಆರೋಗ್ಯ ವಿಚಾರಿಸಲು ಇಲ್ಲಿಯವರೆಗೂ ಬಂದಿರುವುದನ್ನು ಕಂಡು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಆಕೆಯ ಕೈ ಹಿಡಿದುಕೊಂಡು, ವಿದ್ಯಾಭ್ಯಾಸ, ಊಟೋಪಚಾರ ಮತ್ತಿತರ ವಿಷಯಗಳ ಮಾಹಿತಿ ಪಡೆದರು. ಉತ್ತಮವಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆಯುವಂತೆ ಅವರು ಬಾಲಕಿಗೆ ಸೂಚಿಸಿದರು.  

ಜೊತೆಗೆ, ಹಾಸ್ಟೆಲ್ ನಲ್ಲಿರುವ ಇತರ ಮಕ್ಕಳೊಂದಿಗೂ ವಿಡಿಯೋ ಕಾಲ್ ಮೂಲಕ ಸಚಿವರ ಜೊತೆ ಬಾಲಕಿ ಮಾತನಾಡಿಸಿದಳು. ಹಾಸ್ಟೆಲ್ ವ್ಯವಸ್ಥೆ, ಶಿಕ್ಷಣಗಳ ಕುರಿತು ಆ ಮಕ್ಕಳಿಂದಲೂ ಸಚಿವರು ಮಾಹಿತಿ ಪಡೆದು, ಉತ್ತಮ ಭವಿಷ್ಯಕ್ಕೆ ಹಾರೈಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button