ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಫೇಸ್ ಬುಕ್ ನಲ್ಲಿ ಸೌಂದರ್ಯ ತೋರಿಸಿ ಪುರುಷರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಹನಿಟ್ರ್ಯಾಪ್ ಗೆ ಯತ್ನಿಸಿದ್ದ ಮಾಯಾಂಗನೆ ಈಗ ಸ್ವತಃ ಟ್ರ್ಯಾಪ್ ಆಗಿದ್ದಾಳೆ.
ಈಕೆಯ ನಕಲಿ ಅಂದಕ್ಕೆ ಮಾರುಹೋಗಿ ಸಿಂದಗಿ ತಾಲೂಕಿನ ಯುವಕ ಲಕ್ಷಾಂತರ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ.
ಬಗಲೂರು ಗ್ರಾಮದ ಪರಮೇಶ ಎಂಬ ಯುವಕ ಹೈದರಾಬಾದ್ ನಲ್ಲಿ ಕಟ್ಟಡ ನಿರ್ಮಾಣದ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಮಾಸಿಕ 30 ಸಾವಿರ ರೂ. ಆದಾಯ ಹೊಂದಿದ್ದ ಇವರಿಗೆ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು.
ಚಾಟಿಂಗ್ ಮೇಲೆ ಚಾಟಿಂಗ್ ಮಾಡುತ್ತ ಪ್ರೀತಿಯ ಪ್ರಪಾತಕ್ಕೆ ಬಿದ್ದ ಯುವಕ ಆಕೆಯೊಂದಿಗೆ ಮದುವೆಯಾಗುವ ಹಂತದವರೆಗೂ ತಲುಪಿದ್ದರು. ಏತನ್ಮಧ್ಯೆ ಫೇಸ್ ಬುಕ್ ಸುಂದರಿ ಡಿಸಿಯಾಗಲು ಬಯಸಿರುವ ತಾನು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಿದ್ದು ಹಣದ ಅಗತ್ಯವಿದೆ ಎಂದು ಹೇಳಿಕೊಂಡು ಬರೊಬ್ಬರಿ 40 ಲಕ್ಷ ರೂ. ಪಡೆದು ನಾಮ ಹಾಕಿದ್ದಳು.
ಮಾತಿನ ಬೆಣ್ಣೆ ಸವರುತ್ತಲೇ ಯುವಕ ಸ್ನಾನ ಮಾಡುತ್ತಿರುವ ದೃಶ್ಯದ ವಿಡಿಯೊ ಪಡೆದುಕೊಂಡಿದ್ದ ಮಾಯಾಂಗಿನಿ ಪದೇಪದೇ ಹಣಕ್ಕಾಗಿ ಬೇಡಿಕೆಯಿಡುತ್ತ ಕೊನೆಗೆ ವಿಡಿಯೊ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದಾಗಲೇ ಪರಮೇಶ್ ಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಎಸ್ಪಿ ಆನಂದಕುಮಾರ್ ಅವರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ದಾಸರಹಳ್ಳಿ ಗ್ರಾಮದ ಮಹಿಳೆಯನ್ನು ಬಂಧಿಸಿದ್ದಾರೆ.
Manjula KR ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದ ಮಹಿಳೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮೊದಲ ಬಾರಿಗೆ ತನ್ನ ತಾಯಿಯ ಆರೋಗ್ಯ ಸಮಸ್ಯೆ ಇರುವ ನೆಪ ಹೇಳಿ 700 ರೂ. ಪೇಫೋನ್ ಮೂಲಕ ಪಡೆದಿದ್ದಳು. ನಂತರ ಶುರುವಾದ ಹಣ ಬಾಚುವ ದಂಧೆ ಬಗ್ಗೆ ಪರಮೇಶ್ ಗೆ ಎಚ್ಚರವಾಗುವ ವೇಳೆ ಬರೊಬ್ಬರಿ 40 ಲಕ್ಷ ರೂ. ಕೈಜಾರಿತ್ತು.
ಇಷ್ಟಕ್ಕೂ ಈ ದಂಧೆಗೆ ಮಹಿಳೆಯ ಪತಿಯೇ ಬೆನ್ನೆಲುಬಾಗಿ ನಿಂತಿದ್ದು ತನಿಖೆಯಿಂದ ತಿಳಿದುಬಂದಿದೆ. ಈಕೆ ಸುಂದರ ಮಾಡೆಲ್ ಒಬ್ಬಳ ಡಿಪಿ ಬಳಸಿ ಜಾಲ ಬೀಸಿದ್ದಳು. ಇಂಥ ಮತ್ತೆಷ್ಟು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾಳೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಾರಿವಾಳ ಹಿಡಿಯಲು ಹೋದ ಬಾಲಕರು; ಕರೆಂಟ್ ಶಾಕ್ ಹೊಡೆದು ಗಂಭೀರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ