ಎಂ.ಕೆ.ಹೆಗಡೆ, ಬೆಳಗಾವಿ – ರಾಜ್ಯ ರಾಜಕೀಯದಲ್ಲಿ ತೀವ್ರ ಗತಿಯ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದ ಬಿಜೆಪಿ ಸರಕಾರದಲ್ಲಿ ಕೆಲವು ಬದಲಾವಣೆಗಳು ನಿಶ್ಚಿತವಾಗಿದ್ದು, ಬುಧವಾರ ಸಂಜೆಯ ಹೊತ್ತಿಗೆ 2 ಸಾಧ್ಯತೆಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ಎಚ್.ವಿಶ್ವನಾಥ, ಎಂಟಿಬಿ ನಾಗರಾಜ, ಆರ್.ಶಂಕರ್ ಮತ್ತಿತರರನ್ನು ಸೇರಿಸಿಕೊಂಡು ಸಂಪುಟ ವಿಸ್ತರಿಸುವುದು ಖಚಿತ. ಈ ವೇಳೆ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ.
ಸಂಪುಟ ಪುನಾರಚನೆ ಮಾಡಿ ಕೆಲವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಆಲೋಚನೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದ್ದಾರೆ. ಕೈ ಬಿಡುವ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಕೂಡ ಇದ್ದಾರೆ. ಹಾಗಾಗಿ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಅವರು ದೆಹಲಿಗೆ ತೆರಳಿದ್ದರು ಎನ್ನುವ ಸುದ್ದಿ ದಟ್ಟವಾಗಿದೆ. ಲಕ್ಷ್ಮಣ ಸವದಿಯವರನ್ನು ಮಂತ್ರಿ ಮಾಡುವಾಗ ಹಾಗೂ ಉಪಮುಖ್ಯಮಂತ್ರಿ ಮಾಡುವಾಗ ಇದ್ದ ಆಸಕ್ತಿಯನ್ನು ಹೈಕಮಾಂಡ್ ಅವರ ಬಗೆಗೆ ಈಗ ತೋರಿಸುತ್ತಿಲ್ಲ ಎನ್ನುವ ಮಾತು ಹರಿದಾಡುತ್ತಿದೆ.
ಹಾಗಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಸಚಿವ ಸಂಪುಟದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ, ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸಬೇಕು ಎನ್ನುವುದು ಒಂದು ಲೆಕ್ಕಾಚಾರ.
ಇನ್ನೊಂದು ಲೆಕ್ಕಾಚಾರದ ಪ್ರಕಾರ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡ್ರಿಸುವುದು. ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿರುವ ಹೆಸರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರದ್ದು. ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿಯಾದರೆ, ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು. ಈ ಸಮೀಕರಣಕ್ಕೆ ಒಪ್ಪಿವಂತೆ ಯಡಿಯೂರಪ್ಪನವರ ಮನವೊಲಿಸಬೇಕು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ.
ಈಚೆಗೆ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ 2 ಬಾರಿ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದು ಕೂಡ ಇದಕ್ಕೆ ಪುಷ್ಠಿ ನೀಡುವಂತಿದೆ. ಬಿಜೆಪಿ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಮತ್ತು ತಂಡ ಕೂಡ ಈ ಎರಡೂ ಸಮೀಕರಣಕ್ಕೆ ಒಪ್ಪಿದೆ ಎಂದು ಗೊತ್ತಾಗಿದೆ. ಹೆಚ್ಚು ವಿವಾದವನ್ನು ಮೈಮೇಲೆಳೆದುಕೊಳ್ಳದೆ ಇವೆರಡರಲ್ಲಿ ಒಂದನ್ನು ಅಂತಿಮಗೊಳಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಇನ್ನು ಒಂದೆರಡು ವಾರದಲ್ಲಿ ಇದ್ದಕ್ಕೆಲ್ಲ ಸ್ಪಷ್ಟ ರೂಪ ಸಿಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ